ಹಾಸನ: ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಕರ್ತವ್ಯದಲ್ಲಿದ್ದ ಯೋಧ ಸೇರಿ ಮೂವರು ಮೃತಪಟ್ಟಿದ್ದು, ಅವರಲ್ಲಿ ಇಬ್ಬರು ಸರ್ಕಾರಿ ಅಧಿಕಾರಿಗಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಆಲೂರು ತಾಲ್ಲೂಕಿನ ಹಾಂಜಿಹಳ್ಳಿ ಗ್ರಾಮದ ಮಧು.ಹೆಚ್.ಹೆಚ್. (34) ಅವರು ಅಸ್ಸಾಂನಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್)ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದಿಢೀರ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಕಳೆದ 15 ವರ್ಷಗಳಿಂದ ಬಿಎಸ್‌ಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರಿಗೆ ನಿವೃತ್ತಿಗೆ ಇನ್ನು ಕೇವಲ ಮೂರು ತಿಂಗಳು ಬಾಕಿ ಇತ್ತು. ಒಂದೂವರೆ ತಿಂಗಳ ಹಿಂದಷ್ಟೇ ಅವರ ಪತ್ನಿಗೆ ಮಗು ಜನಿಸಿತ್ತು. ಸಾವಿಗೂ ಮುನ್ನ ಕುಟುಂಬಸ್ಥರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದ ಮಧು ಅವರು ಬಳಿಕ ಅನಾರೋಗ್ಯಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಹಾಂಜಿಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
ಇದೇ ವೇಳೆ ಸಕಲೇಶಪುರದಲ್ಲಿ ಪಶುಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಡಾ. ವೆಂಕಟೇಶ್ (55) ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರಾದ ಅವರು ಕಳೆದ ಐದಾರು ವರ್ಷಗಳಿಂದ ಸಕಲೇಶಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕುಟುಂಬ ಬೆಂಗಳೂರಿನಲ್ಲಿ ನೆಲೆಸಿದ್ದು, ಸಕಲೇಶಪುರದಲ್ಲಿ ಒಬ್ಬರೇ ವಾಸವಿದ್ದರು. ಗುರುವಾರ ಕೆಲಸ ಮುಗಿಸಿ ಮನೆಗೆ ತೆರಳಿದ್ದ ಅವರು, ಶುಕ್ರವಾರ ಬೆಳಿಗ್ಗೆ ಮನೆಯಲ್ಲೇ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಫೋನ್ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಸಿಬ್ಬಂದಿ ಮನೆಗೆ ತೆರಳಿ ಪರಿಶೀಲಿಸಿದಾಗ ಘಟನೆ ತಿಳಿದುಬಂದಿದೆ.
ಹಾಸನ ನಗರದ ಸದಾಶಿವನಗರದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಅಧೀಕ್ಷಕ ವೇಣುಗೋಪಾಲ್ (45) ಕೂಡ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಮನೆಯಲ್ಲಿ ಮಲಗಿದ್ದ ವೇಳೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ. ಅವರು ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಹಾಸನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದರು.
