ಹಾಸನ: ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುತ್ತಾ ಗ್ರಾಮದಲ್ಲಿ ಶಾಂತಿಗೆ ಭಂಗ ತರುವುದನ್ನು ಖಂಡಿಸಿ ಬುದ್ದಿವಾದ ಹೇಳಿದ್ದಕ್ಕೆ ಊರಿನ ಹಿರಿಯನನ್ನೇ ಕೊಲೆ ಮಾಡಿದ್ದ ಅಪರಾಧಿಗೆ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಬೇಲೂರು ತಾಲ್ಲೂಕು ವಡ್ಡರಹಳ್ಳಿ ಕೊಪ್ಪಲು ಗ್ರಾಮದ ಯಶವಂತ ಅಪರಾಧಿ. ಅದೇ ಗ್ರಾಮದ ಸೋಮಯ್ಯ ಅವರನ್ನು 2022ರ ಜ. 15ರಂದು ಕೊಲೆ ಮಾಡಿದ್ದ. ಮದ್ಯದ ದಾಸನಾಗಿದ್ದ ಯಶವಂತ ಆಗಾಗ ಜನರೊಂದಿಗೆ ಜಗಳ ಮಾಡುತ್ತಿದ್ದ. ರಾಜಿ ಪಂಚಾಯಿತಿ ಸಂದರ್ಭದಲ್ಲಿ ಸೋಮಯ್ಯ ಅವರು ಬುದ್ದಿವಾದ ಹೇಳುತ್ತಿದ್ದರು. ಅಷ್ಟಕ್ಕೆ ದ್ವೇಷ ಸಾಧಿಸಿದ ಯಶವಂತನು ಆ ದಿನ ಸಂಜೆ 6.30ರ ಸಮಯದಲ್ಲಿ ಸೋಮಯ್ಯ ಹಾಗು ಇತರರು ವಡ್ಡರಹಳ್ಳಿಗೆ ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ತಡೆದು ವಾಗ್ವಾದ ಶುರು ಮಾಡಿದ್ದ. ಜೊತೆಯಲ್ಲಿದ್ದವರು ಸಮಾಧಾನಪಡಿಸಿ ಕಳುಹಿಸಿದ್ದರು. ಅಷ್ಟಕ್ಕೆ ಸುಮನಾಗದ ಆತ ಸಂಜೆ 7ರ ವೇಳೆಗೆ ಮತ್ತೆ ಸೋಮಯ್ಯಗೆ ಮುಖಾಮುಖಿಯಾಗಿ ಗಲಾಟೆ ಮಾಡಿದ್ದನ್ನಲ್ಲದೆ ಕೊಲೆ ಮಾಡುವುದಕ್ಕಾಗಿಯೇ ತಯಾರಿಯೊಂದಿಗೆ ಬಂದಿದ್ದ. ಜೊತೆಗೆ ತಂದಿದ್ದ ಕೊಡಲಿಯಿಂದ 4 ಬಾರಿ ಬಲವಾಗಿ ಹೊಡೆದಿದ್ದ. ಗಂಭೀರ ಗಾಯಗೊಂಡಿದ್ದ ಸೋಮಯ್ಯ ಮೃತಪಟ್ಟಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಹಳೇಬೀಡು ಪೊಲೀಸರು ನ್ಯಾಯಾಲಯಕ್ಕೆ ದೋಷಾರಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹೆಚ್.ಆರ್.ರವಿಕುಮಾರ್ ಅವರು ಯಶವಂತಗೆ ಜೀವಾವಧಿ ಶಿಕ್ಷೆ ಹಾಗು 30 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಈ.ಡಿ. ಶ್ರೀನಿವಾಸ್ ವಾದ ಮಂಡಿಸಿದ್ದರು.
