ಹಾಸನ: ಜಿಲ್ಲಾ ಕಾರಾಗೃಹದಲ್ಲಿ ಆ. 28ರ ಶುಕ್ರವಾರ ವಿಚಾರಣಾಧೀನ ಖೈದಿಗಳ ನಡುವೆ ನಡೆದ ಗಲಾಟೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ.

ಡಿಎಸ್‌‍ಬಿಯಿಂದ ಮಾಧ್ಯಮಗಳಿಗೆ ಕಳುಹಿಸಿದ್ದ ಮಾಹಿತಿಯಲ್ಲಿ ವಿಚಾರಣಾಧೀನ ಖೈದಿಗಳಾದ ಮೋಹನಕುಮಾರ್‌ ಹಾಗು ರಂಗಸ್ವಾಮಿ ದೂರವಾಣಿ ಕರೆ ವಿಚಾರವಾಗಿ ಹೊಡೆದಾಡಿಕೊಂಡು ಜಗಳ ಬಿಡಿಸಲು ಬಂದ ಸಿಬ್ಬಂದಿ ವಿರೇಶ್‌ ಸಂಗಮದ್‌ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿತ್ತು.
ಖೈದಿ ರಂಗಸ್ವಾಮಿ ಮೇಲೆ ಮೋಹನಕುಮಾರ್‌ ಮಾತ್ರವಲ್ಲದೆ ಇನ್ನು ಏಳೆಂಟು ಜನರು ಹಲ್ಲೆ ಮಾಡಿದ್ದರು. ಜಗಳ ಬಿಡಿಸುವಾಗ ವಿರೇಶ್‌ ಅವರನ್ನು ತಳ್ಳಿದ್ದರು ಎನ್ನಲಾಗಿತ್ತು. ಆದರೆ ನಗರ ಠಾಣೆಯಲ್ಲಿ ಶನಿವಾರ ದಾಖಲಿಸಿದ ಎಫ್‌ಐಆರ್‌ನಲ್ಲಿ ಬೇರೆ ಮಾಹಿತಿ ದೃಢೀಕರಿಸಲಾಗಿದೆ.
ಆರೋಪಿ ವಿಕಾಸ್‌‍ ಎಂಬಾತ ತನ್ನನ್ನು ಆಸ್ಪತ್ರೆಗೆ ದಾಖಲಿಸಬೇಕೆಂದು ಕೋರಿದ್ದ. ಕಾರಾಗೃಹ ಸಿಬ್ಬಂದಿ ಮೊಹಮದ್‌ ಅಲಿ ನದಾಫ್‌ ಅವರು ಆಸ್ಪತ್ರೆಗೆ ದಾಖಲಿಸುವುದು ಅಸಾಧ್ಯ ಎಂದಾಗ ಹೊರಗೆ ಸಿಗು ಎಂದು ಬೆದರಿಕೆ ಹಾಕಿದ್ದ. ಇದೇ ವಿಚಾರಕ್ಕೆ ಸಿಬ್ಬಂದಿ ಜೊತೆ ಅನುಚಿತವಾಗಿ ವರ್ತಿಸಿದ್ದ ವಿಕಾಸ್‌‍ ಕೆಲ ಹೊತ್ತಿನ ಬಳಿಕ ತಾನು 10 ಮಾತ್ರೆ ಸೇವಿಸಿದ್ದೇನೆಂದು ಹೇಳಿದ್ದ. ಆಗ ಭಯಗೊಂಡ ಸಿಬ್ಬಂದಿ ಮೇಲಾಧಿಕಾರಿಗಳ ಅನುಮತಿ ಪಡೆದು ಆತನನ್ನು ಭದ್ರತೆಯೊಂದಿಗೆ ಆಸ್ಪತ್ರೆಗೆ ದಾಖಲಿಸಿದ್ದರು. ಪರೀಕ್ಷಾ ವರದಿಯಲ್ಲಿ ಆತ ಯಾವುದೇ ಮಾತ್ರ ಸೇವಿಸಿರಲಿಲ್ಲ, ಸುಳ್ಳು ಹೇಳಿದ್ದಾನೆಂದು ಸಾಬೀತಾಗಿದೆ. ಆಸ್ಪತ್ರೆಗೆ ದಾಖಲಾಗುವ ದುರುದ್ದೇಶದಿಂದ ಆತ್ಮಹತ್ಯೆಯ ನಾಟಕವಾಡಿದ ಹಾಗು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆಂದು ವಿಕಾಸ್‌‍ ವಿರುದ್ಧ ದೂರು ಸಲ್ಲಿಸಲಾಗಿದೆ.
ಈತ ರೌಡಿ ಶೀಟರ್‌ ಮಂಜೇಶ್‌ ಹತ್ಯೆ ಪ್ರಕರಣದ ಆರೋಪಿ ಎನ್ನಲಾಗಿದೆ. ಆದರೆ ಡಿಎಸ್‌‍ಬಿಯಿಂದ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಹತ್ತಕ್ಕೂ ಅಧಿಕ ಆರೋಪಿಗಳ ಹೆಸರು ಮತ್ತು ಗಾಯಾಳು ಸಿಬ್ಬಂದಿ ಹೆಸರು ಬೇರೆ ಇದೆ. ಇದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

Leave a Reply

Your email address will not be published. Required fields are marked *