ಬೇಲೂರು: ಸರ್ಕಾರದ ಸ್ವಾರ್ಥಕ್ಕಾಗಿ ನಡೆಸುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮಸ್ಯೆಯಿಂದ ಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ ಎಂದು ಶಾಸಕ ಹೆಚ್.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.
ಬೇಲೂರಿನಲ್ಲಿ ಸಮೀಕ್ಷೆ ಕಾರ್ಯಕ್ಕೆ ತೆರಳಿದ್ದ ಶಿಕ್ಷಕಿ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಆಸ್ಪತ್ರೆಗೆ ತೆರಳಿ ಶಿಕ್ಷಕಿ ಆರೋಗ್ಯ ವಿಚಾರಿಸಿ ಮಾತನಾಡಿದ ಅವರು, ಸರ್ಕಾರಿ ಶಿಕ್ಷಕರ ಮೇಲೆ ಅನಗತ್ಯ ಒತ್ತಡ ಹಾಕಲಾಗುತ್ತಿದೆ. ನಿಗದಿತ ಅವಧಿಯೊಳಗೆ ಸಮೀಕ್ಷೆ ಮುಗಿಸಬೇಕೆಂದು ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ. ಕೆಲ ಶಿಕ್ಷಕರಿಗೆ 300 ಮನೆಗಳ ಟಾರ್ಗೆಟ್ ನೀಡಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆ, ಬೀದಿ ನಾಯಿಗಳ ಹಾವಳಿ, ಮಲೆನಾಡಿನಲ್ಲಿ ಕಾಡಾನೆಗಳ ದಾಳಿ, ಜಾವಗಲ್ ಭಾಗದಲ್ಲಿ ಚಿರತೆಗಳ ಭೀತಿ ಇದೆ. ಇಂತಹ ಪರಿಸ್ಥಿತಿಯಲ್ಲಿಯೂ ಶಿಕ್ಷಕರಿಗೆ ನಿರ್ದಿಷ್ಟ ಅವಧಿ ನಿಗದಿ ಮಾಡಿ ಕೆಲಸಕ್ಕೆ ಒತ್ತಾಯಿಸುವುದು ಮಾನಸಿಕ ಹಿಂಸೆ ನೀಡುವಂತಾಗಿದೆ ಎಂದು ಶಾಸಕರು ಆರೋಪಿಸಿದರು.
ವೈದ್ಯರಿಂದ ಚಿಕಿತ್ಸೆ ಕುರಿತು ಮಾಹಿತಿ ಪಡೆದ ಶಾಸಕರು, ಸರ್ಕಾರವು ಶಿಕ್ಷಕರ ಸುರಕ್ಷತೆ ಮತ್ತು ಸಮೀಕ್ಷೆ ಪ್ರಕ್ರಿಯೆ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
