ಹಾಸನ: ನಗರದ ಸಾಲಗಾಮೆ ರಸ್ತೆಯಲ್ಲಿರುವ ಜಿಲ್ಲಾ ಖಜಾನೆಯಿಂದ ಹಾಸನಾಂಬ ದೇವಿಯ ಒಡವೆಗಳನ್ನು ಸೋಮವಾರ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ ದೇವಾಲಯಕ್ಕೆ ರವಾನಿಸಲಾಯಿತು.
ತಹಸೀಲ್ದಾರ್ ಗೀತಾ ಅವರ ನೇತೃತ್ವದಲ್ಲಿ ಒಡವೆಗಳಿದ್ದ ಪೆಟ್ಟಿಗೆಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಮಂಗಳವಾದ್ಯದೊಂದಿಗೆ ಬೆಳ್ಳಿ ರಥದಲ್ಲಿ ಅರ್ಚಕರು ಒಡವೆಗಳನ್ನು ಮೆರವಣಿಗೆಯ ಮೂಲಕ ಹಾಸನಾಂಬ ದೇವಾಲಯಕ್ಕೆ ಕೊಂಡೊಯ್ದರು.
ದೇವಾಲಯದ ಪ್ರಧಾನ ಅರ್ಚಕ ನಾಗರಾಜ್ ಅವರ ನೇತೃತ್ವದಲ್ಲಿ ದೇವಿಯ ಆಭರಣಗಳನ್ನು ಗರ್ಭಗುಡಿಗೆ ತಲುಪಿಸಲಾಯಿತು. ಅಕ್ಟೋಬರ್ 9ರಂದು (ಗುರುವಾರ) ಹಾಸನಾಂಬ ದೇವಾಲಯದ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ಅಕ್ಟೋಬರ್ 23ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.