ಹಾಸನ: ಪ್ರತಿಯೊಂದು ಘಟನೆ ಮತ್ತು ಉತ್ಪಾದನೆಯ ಹಿಂದೆಯೂ ವೈಜ್ಞಾನಿಕ ಕಾರಣಗಳಿರುತ್ತವೆ. ಹಾಗಾಗಿ ವಿಜ್ಞಾನದಿಂದ ಮಾತ್ರ ಈ ಜಗತ್ತು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿಯ (ಬಿಜಿವಿಎಸ್) ಜಿಲ್ಲಾ ಕಾರ್ಯದರ್ಶಿ ಹಾಗೂ ಸಾಹಿತಿ ಚಿನ್ನೇನಹಳ್ಳಿ ಸ್ವಾಮಿ ಅಭಿಪ್ರಾಯಪಟ್ಟರು.
ದೊಡ್ಡಗೆಣಿಗೆರೆಯ ಸರ್ಕಾರಿ ಪ್ರೌಢಶಾಲೆಯಲ್ಲಿ ಬಿಜಿವಿಎಸ್ ಹಾಗೂ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
“ಸಂವಿಧಾನದ ಆಶಯದಂತೆ ಪ್ರತಿಯೊಬ್ಬರೂ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಹಾಗೂ ಇತರರಿಗೆ ಪ್ರೇರೇಪಿಸುವುದು ನಮ್ಮ ಮೂಲಭೂತ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಯಾವುದನ್ನೂ ಕುರುಡಾಗಿ ನಂಬದೆ, ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಮಗೆ ಸಂಸ್ಕೃತಿ ಮತ್ತು ಸಂಪ್ರದಾಯಗಳು ಬೇಕು, ಆದರೆ ಮೌಢ್ಯತೆ ಬೇಡ” ಎಂದು ಕಿವಿಮಾತು ಹೇಳಿದರು. “ಮೊದಲು ನಿಮ್ಮನ್ನು ನೀವು ನಂಬಿ, ಪೋಷಕರ ಮೇಲೆ ಸಂಪೂರ್ಣ ಅವಲಂಬಿತರಾಗದೆ ಬದುಕಲು ಕಲಿಯಿರಿ. ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವವನ್ನು ಅಳವಡಿಸಿಕೊಳ್ಳಿ. ಪ್ರಕೃತಿ ನಮಗೆ ನೀಡಿರುವ ಸಂಪನ್ಮೂಲಗಳನ್ನು ಮುಂದಿನ ಪೀಳಿಗೆಗೆ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಚಿಂತಿಸಬೇಕು” ಎಂದು ಸಲಹೆ ನೀಡಿದರು.
ಪ್ಲಾಸ್ಟಿಕ್ ತ್ಯಾಜ್ಯದಿಂದ ಇಟ್ಟಿಗೆ ತಯಾರಿಕೆ – ಕಸದಿಂದ ರಸ:
ಇದೇ ಸಂದರ್ಭದಲ್ಲಿ ಶಾಲೆಯ ಇಕೋ ಕ್ಲಬ್ (Eco Club) ವತಿಯಿಂದ ನಡೆದ ‘ಕಸದಿಂದ ರಸ’ ಕಾರ್ಯಕ್ರಮದಲ್ಲಿ ಬಿಜಿವಿಎಸ್ ಜಿಲ್ಲಾ ಪ್ರಕಟಣಾ ಸಮಿತಿ ಸಂಚಾಲಕಿ ಮೋನಿಕಾ ಅವರು ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು.
“ಭೂಮಿಯ ಮೇಲಿನ ಪರಿಸರ ನಾಶಕ್ಕೆ ನಾವು ಎಲ್ಲೆಂದರಲ್ಲಿ ಎಸೆಯುವ ಕಸವೇ ಮೂಲ ಕಾರಣ. ಇಂದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿರುವ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸರಿಯಾಗಿ ವಿಲೇವಾರಿ ಮಾಡದ ಕಾರಣ, ಅವು ಮಣ್ಣು ಸೇರಿ ಮೈಕ್ರೋ ಪ್ಲಾಸ್ಟಿಕ್ ಆಗಿ ಪರಿವರ್ತನೆಗೊಂಡು, ಮತ್ತೆ ಮನುಷ್ಯನ ದೇಹ ಸೇರಿ ಕ್ಯಾನ್ಸರ್ನಂತಹ ಮಾರಕ ರೋಗಗಳಿಗೆ ಕಾರಣವಾಗುತ್ತಿವೆ. ಒಂದು ಚಿಕ್ಕ ಪ್ಲಾಸ್ಟಿಕ್ ತುಂಡು ಕೂಡ ಭೂಮಿಗೆ ಸೇರದಂತೆ ತಡೆಯುವುದು ನಾವು ಸಮಾಜಕ್ಕೆ ಕೊಡುವ ಅತಿದೊಡ್ಡ ಕೊಡುಗೆಯಾಗಿದೆ. ಕಸವನ್ನು ರಸವನ್ನಾಗಿ ಮಾಡುವ ಕಲೆಯನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು” ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತ್ಯಾಜ್ಯ ಪ್ಲಾಸ್ಟಿಕ್ ಬಳಸಿ ಅಲಂಕಾರಿಕ ಇಟ್ಟಿಗೆಗಳನ್ನು ತಯಾರಿಸುವ ಕುತೂಹಲಕಾರಿ ಪ್ರಾತ್ಯಕ್ಷಿಕೆಯನ್ನು ಮೋನಿಕಾ ಅವರು ವಿದ್ಯಾರ್ಥಿಗಳಿಗೆ ಮಾಡಿತೋರಿಸಿದರು.
ಕಾರ್ಯಕ್ರಮದಲ್ಲಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕಿ ಆಶಾ ಕಿರಣ್ ಸೇರಿದಂತೆ ಶಾಲೆಯ ಇತರ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *