ಹಾಸನ: ತಾಯಿ ಚನ್ನಮ್ಮ ಅವರ ಹನ್ನೊಂದನೇ ದಿನದ ಕಾರ್ಯವನ್ನು ಹರದನಹಳ್ಳಿಯಲ್ಲಿ ನಡೆಸಲು ಎಲ್ಲಾ ರೀತಿಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಹರದನಹಳ್ಳಿಯಲ್ಲಿ ಮಾತನಾಡಿದ ಅವರು, “ಅಮ್ಮನವರ ಮೇಲಿನ ಅಭಿಮಾನದಿಂದ ಆತ್ಮಕ್ಕೆ ಶಾಂತಿ ಕೋರಲು ಲಕ್ಷಾಂತರ ಜನರು ಬರುತ್ತಾರೆ. ಕಾರ್ಯಕ್ರಮಕ್ಕೆ ಬರುವವರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲಾ ಸೌಲಭ್ಯಗಳನ್ನು ಮಾಡಿದ್ದೇವೆ. ಯಾವುದೇ ಸಮಸ್ಯೆ ಆಗದ ರೀತಿಯಲ್ಲಿ ಸಿದ್ಧತೆ ನಡೆದಿದೆ” ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ 1 ಲಕ್ಷದಿಂದ 2.5 ಲಕ್ಷದವರೆಗೆ ಜನರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಕುಮಾರಸ್ವಾಮಿ ತಿಳಿಸಿದರು.
ದೇವೇಗೌಡರ ಆರೋಗ್ಯದ ಬಗ್ಗೆ ಕಳವಳ:
ಚೆನ್ನಮ್ಮ ನವರ ನಿಧನದಿಂದ ದೇವೇಗೌಡರು ಪ್ರತಿನಿತ್ಯ ಚಿಂತೆಯಲ್ಲಿದ್ದಾರೆ. ಭಾವನಾತ್ಮಕ ವಿಷಯಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ಪರಿಣಾಮ ಬೀರಬಾರದು ಎಂಬ ಚಿಂತೆ ಇದೆ. ಎಲ್ಲಾ ರೀತಿಯಲ್ಲೂ ಅವರಿಗೆ ಸ್ಥೈರ್ಯ ತುಂಬುವ ಕೆಲಸವನ್ನು ಕುಟುಂಬದವರು ಮಾಡುತ್ತಿದ್ದೇವೆ ಎಂದು ಹೇಳಿದರು.
“73 ವರ್ಷದ ಸುದೀರ್ಘ ಜೀವನ ನಡೆಸಿದ ದೇವೇಗೌಡರು ತಮ್ಮ ಜೀವನ ಸಂಗಾತಿಯನ್ನು ಕಳೆದುಕೊಂಡಿದ್ದಾರೆ. ಅದರಿಂದ ಹೊರಗೆ ಬರಲು ಸಮಯ ಬೇಕಾಗುತ್ತದೆ. ಆ ನೋವನ್ನು ಕಡಿಮೆ ಮಾಡಲು ಅಭಿಮಾನಿಗಳು ಬರುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ನಾವು ಎಚ್ಚರಿಕೆ ವಹಿಸಿದ್ದೇವೆ” ಎಂದು ಹೆಚ್.ಡಿ.ಕೆ ಹೇಳಿದರು.
ಚೆನ್ನಮ್ಮ ನವರ ಅಗಲಿಕೆಯು ಮಕ್ಕಳು ತಾಯಿಯನ್ನು ಕಳೆದುಕೊಂಡಂತೆ ಆಗಿದ್ದು, ಅದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದು ಭಾವುಕರಾಗಿ ನುಡಿದರು.
ಶಾಸಕ ಎಚ್.ಡಿ.ರೇವಣ್ಣ, ಎಂಎಲ್ಸಿ ಬೋಜೇಗೌಡ ಇತರರಿದ್ದರು.
