ಸಕಲೇಶಪುರ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಸಕಲೇಶಪುರ ತಾಲೂಕಿನ ಯಡಕುಮಾರಿ–ಶಿರವಾಗಿಲು ನಡುವೆ ರೈಲ್ವೆ ಹಳಿ ಮೇಲೆ ಭೂಕುಸಿತ ಸಂಭವಿಸಿದ್ದು, ಬೆಂಗಳೂರು–ಮಂಗಳೂರು ಮಾರ್ಗದ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಪಶ್ಚಿಮ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯ ಪರಿಣಾಮ ಸಕಲೇಶಪುರ ತಾಲೂಕಿನ ಯಡಕುಮರಿ–ಶಿರಿಬಾಗಿಲು ರೈಲು ನಿಲ್ದಾಣಗಳ ನಡುವಿನ ಹಳಿಯಲ್ಲಿ ಶನಿವಾರ ರಾತ್ರಿ ಸುಮಾರು 8.45ಕ್ಕೆ ಭಾರಿ ಭೂಕುಸಿತ ಸಂಭವಿಸಿದ್ದು, ಬೆಂಗಳೂರು–ಮಂಗಳೂರು ರೈಲು ಮಾರ್ಗದಲ್ಲಿ ರೈಲು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ಸುರಕ್ಷತಾ ದೃಷ್ಟಿಯಿಂದ ನೈಋತ್ಯ ರೈಲ್ವೆ ಈ ಮಾರ್ಗದಲ್ಲಿ ಸಂಚಾರ ನಡೆಸುತ್ತಿದ್ದ ಪ್ರಮುಖ ರೈಲುಗಳ ಸೇವೆಯನ್ನು ಭಾಗಶಃ ರದ್ದುಗೊಳಿಸಿ ತಾತ್ಕಾಲಿಕ ಆದೇಶ ಹೊರಡಿಸಿದೆ.

ಭೂಕುಸಿತದಿಂದ ರೈಲು ಹಳಿಯ ಮೇಲೆ ಅಪಾರ ಪ್ರಮಾಣದ ಮಣ್ಣು ಹಾಗೂ ಬೃಹತ್ ಬಂಡೆಕಲ್ಲುಗಳು ಕುಸಿದು ಬಿದ್ದಿರುವ ಹಿನ್ನೆಲೆಯಲ್ಲಿ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಘಟನಾ ಸ್ಥಳದಲ್ಲಿ ಹಳಿ ಮೇಲಿನ ಮಣ್ಣು ಹಾಗೂ ಬಂಡೆಗಳನ್ನು ತೆರವುಗೊಳಿಸಿ ಹಳಿ ಪುನಃಸ್ಥಾಪಿಸುವ ಕಾರ್ಯಾಚರಣೆ ಭರದಿಂದ ಸಾಗುತ್ತಿದೆ. ಆದರೆ ನಿರಂತರ ಮಳೆಯ ಕಾರಣ ಕಾಮಗಾರಿ ಸವಾಲಿನದ್ದಾಗಿದೆ.

ರೈಲು ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಬೆಂಗಳೂರು–ಮುರುಡೇಶ್ವರ (16585), ಕೆಎಸ್‌ಆರ್ ಬೆಂಗಳೂರು–ಕೊಝಿಕೋಡ್ (16511) ಹಾಗೂ ವಿಜಯಪುರ–ಮಂಗಳೂರು ಸೆಂಟ್ರಲ್ (17377) ರೈಲುಗಳನ್ನು ಹಾಸನದಲ್ಲೇ ಸ್ಥಗಿತಗೊಳಿಸಲಾಗಿದೆ. ಕೆಎಸ್‌ಆರ್ ಬೆಂಗಳೂರು–ಕಾರವಾರ ಎಕ್ಸ್‌ಪ್ರೆಸ್ (16595) ರೈಲು ಸಕಲೇಶಪುರದಲ್ಲೇ ಪ್ರಯಾಣ ಅಂತ್ಯಗೊಳಿಸಿದೆ.
ಹಿಂತಿರುಗುವ ಮಾರ್ಗದಲ್ಲಿದ್ದ ಮುರುಡೇಶ್ವರ–ಎಸ್‌ಎಂವಿಟಿ ಬೆಂಗಳೂರು (16586) ಹಾಗೂ ಮಂಗಳೂರು ಸೆಂಟ್ರಲ್–ವಿಜಯಪುರ (17378) ರೈಲುಗಳನ್ನು ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲೇ ನಿಲ್ಲಿಸಲಾಗಿದ್ದು, ಕೊಝಿಕೋಡ್–ಕೆಎಸ್‌ಆರ್ ಬೆಂಗಳೂರು (16512) ರೈಲು ಕಬಕ ಪುತ್ತೂರಿನವರೆಗೆ ಮಾತ್ರ ಸಂಚರಿಸಿ, ಅಲ್ಲಿಂದ ಬೆಂಗಳೂರಿನವರೆಗಿನ ಸೇವೆಯನ್ನು ರದ್ದುಗೊಳಿಸಲಾಗಿದೆ.

ರೈಲುಗಳ ಸಂಚಾರ ಸ್ಥಗಿತಗೊಂಡ ಪರಿಣಾಮ ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದು, ನಡುರಾತ್ರಿಯಿಂದಲೇ ಪರ್ಯಾಯ ಸಾರಿಗೆ ವ್ಯವಸ್ಥೆಗಾಗಿ ಪರದಾಡುವಂತಾಯಿತು. ಪ್ರಯಾಣಿಕರಿಗೆ ರೈಲುಗಳ ರದ್ದತಿ ಕುರಿತು ಮಾಹಿತಿ ನೀಡಿರುವ ರೈಲ್ವೆ ಇಲಾಖೆ, ಅಗತ್ಯವಿರುವವರಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಕಾರ್ಯಕ್ಕೂ ಮುಂದಾಗಿದೆ. ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ನೂಕುನುಗ್ಗಲು ಕಂಡುಬಂತು.

ಇದೇ ವೇಳೆ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಗೆ ರೈಲಿನಲ್ಲಿ ತೆರಳುತ್ತಿದ್ದ ಅನೇಕ ಪರೀಕ್ಷಾರ್ಥಿಗಳು ಕೂಡ ರೈಲು ಸಂಚಾರ ಸ್ಥಗಿತಗೊಂಡ ಕಾರಣ ತೀವ್ರ ತೊಂದರೆ ಅನುಭವಿಸಿದರು. ಅವರಿಗೆ ಹಣ ಮರುಪಾವತಿ ಹಾಗೂ ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸಲು ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.

ನೈಋತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಾಡಿ ಅವರು ಮಾಹಿತಿ ನೀಡಿ, ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಹೆಚ್ಚುವರಿ ಹಿಟಾಚಿ ಯಂತ್ರಗಳು ಹಾಗೂ ತಾಂತ್ರಿಕ ಸಿಬ್ಬಂದಿಯನ್ನು ರವಾನಿಸಲಾಗಿದ್ದು, ಹಳಿ ದುರಸ್ತಿ ಕಾರ್ಯಾಚರಣೆ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ಹಳಿ ದುರಸ್ತಿ ಕಾರ್ಯ ಪೂರ್ಣಗೊಳ್ಳುವವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತವಾಗಿರಲಿದ್ದು, ಪ್ರಯಾಣಿಕರು ರೈಲು ನಿಲ್ದಾಣಗಳಿಗೆ ತೆರಳುವ ಮುನ್ನ ರೈಲ್ವೆಯ ಅಧಿಕೃತ ಪ್ರಕಟಣೆಗಳು ಹಾಗೂ ಸಹಾಯವಾಣಿ ಮೂಲಕ ರೈಲುಗಳ ಮಾಹಿತಿ ಪರಿಶೀಲಿಸಿ ಪ್ರಯಾಣಿಸುವಂತೆ ರೈಲ್ವೆ ಇಲಾಖೆ ಮನವಿ ಮಾಡಿದೆ.

Leave a Reply

Your email address will not be published. Required fields are marked *