ಹಾಸನ: ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರು ಜು. 26ರ ಭಾನುವಾರ ಹೊಳೆನರಸೀಪುರ ತಾಲ್ಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿರುವ ಧರ್ಮಪತ್ನಿ ಶ್ರೀಮತಿ ಚನ್ನಮ ಅವರ ಸಮಾಧಿ ಸ್ಥಳಕ್ಕೆ ಭೇಟಿ ನೀಡಲಿದ್ದಾರೆ.
ಜು. 30ರ ಗುರುವಾರ ಶ್ರೀಮತಿ ಚನ್ನಮ ಅವರ 11ನೇ ದಿನದ ಕಾರ್ಯ ನೆರವೇರಲಿದೆ. ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಹೆಚ್‌.ಡಿ.ರೇವಣ್ಣ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಸಿದ್ಧತಾ ಕಾರ್ಯ ಪರಿಶೀಲಿಸಿದರು.
ಲಕ್ಷಕ್ಕೂ ಅಧಿಕ ಜನರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ಜರ್ಮನ್‌ ಟೆಂಟ್‌, ಪಾರ್ಕಿಂಗ್‌ ಸೇರಿ ಅಗತ್ಯ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡ ಅವರು ಶನಿವಾರ ಹರದನಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದು, ಭಾನುವಾರ ಬೆಳಿಗ್ಗೆ 9 ಗಂಟೆಗೆ ಬೆಟ್ಟದ ತಪ್ಪಲಿಗೆ ಭೇಟಿ ನೀಡುವರು. ಸಮಾಧಿ ಸ್ಥಳದಲ್ಲಿ ನಡೆಯಲಿರುವ ವಿಷ್ಣು ಸಹಸ್ರನಾಮ ಹಾಗು ಪಾರಾಯಣ ಪೂಜಾ ವಿಧಿ ವಿಧಾನದಲ್ಲಿ ಪಾಲ್ಗೊಂಡು ನಂತರ 11ನೇ ದಿನದ ಕಾರ್ಯದ ಸಿದ್ಧತೆ ಕುರಿತು ಮಾಹಿತಿ ಪಡೆಯಲಿದ್ದಾರೆ.
ಗಣ್ಯರು ಭಾಗಿಯಾಗುವ ನಿರೀಕ್ಷೆ:
ಜು. 30ರ ಕಾರ್ಯಕ್ರಮದಲ್ಲಿ ರಾಜ್ಯ, ದೇಶದ ವಿವಿಧ ಭಾಗಗಳಿಂದ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಚನ್ನಮ ಅವರು ಅಪಾರ ದೈವಭಕ್ತರಾಗಿದ್ದರಿಂದ ಧಾರ್ಮಿಕ ಕೈಂಕರ್ಯಕ್ಕೆ ಆದ್ಯತೆ ನೀಡಲಾಗಿದೆ. ಜೊತೆಗೆ ಅನ್ನಪೂರ್ಣೇಶ್ವರಿ ಎಂದೇ ಕರೆಸಿಕೊಂಡಿದ್ದ ಚನ್ನಮ ಅವರ ಹೆಸರಿನಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಿಸುವುದು ದೇವೇಗೌಡರ ಕುಟುಂಬಸ್ಥರ ಬಯಕೆಯಾಗಿದೆ. ಈ ಹಿನ್ನಲೆಯಲ್ಲಿ ಭರದ ಸಿದ್ಧತೆ ಕೈಗೊಳ್ಳಲಾಗಿದೆ.
ಜು. 18ರಂದು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಶ್ರೀಮತಿ ಚನ್ನಮ ದೇವೇಗೌಡ ಅವರು ನಿಧನರಾಗಿದ್ದರು. ಜು. 20ರಂದು ಮಾವಿನಕೆರೆ ಬೆಟ್ಟದಲ್ಲಿ ಅಂತ್ಯಕ್ರಿಯೆ ನೆರವೇರಿತು. ಸಮಾಧಿ ಸ್ಥಳವನ್ನು ಐತಿಹಾಸಿಕ ಸಾರಕವಾಗಿಸಲು ಹೆಚ್‌.ಡಿ.ದೇವೇಗೌಡ ಹಾಗು ಪುತ್ರರು ನಿರ್ಧರಿಸಿದ್ದು ಆ ನಿಟ್ಟಿನಲ್ಲಿ ಕಾರ್ಯಯೋಜನೆ ಹಾಕಿಕೊಂಡಿದ್ದಾರೆ. ಜು. 30ರಂದು ಆ ಕುರಿತು ಪೂರ್ಣ ಮಾಹಿತಿ ನೀಡುವುದಾಗಿ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *