ಕಾಡಾನೆ ದಾಳಿ: ರೈತನ ಕಾಲು ಮುರಿತ – ಪ್ರಾಣಾಪಾಯದಿಂದ ಪಾರುಸಕಲೇಶಪುರ : ತಾಲೂಕಿನ ಬ್ಯಾಕರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುದುರಂಗಿ ಸಮೀಪದ ಶಾಂತಪುರ ಗ್ರಾಮದಲ್ಲಿ ಸೋಮವಾರ ಸಂಜೆ ಒಂಟಿ ಕಾಡಾನೆ ದಾಳಿ ನಡೆಸಿದ ಪರಿಣಾಮ ರೈತನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಶಾಂತಪುರ ಗ್ರಾಮದ 54 ವರ್ಷದ ಮಲ್ಲೇಶ್ ಅವರು ಸಂಜೆ ತಮ್ಮ ಗದ್ದೆಯಿಂದ ದನಗಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಏಕಾಏಕಿ ಎದುರಾದ ಒಂಟಿ ಕಾಡಾನೆ ದಾಳಿ ನಡೆಸಿದೆ. ಈ ವೇಳೆ ಕಾಡಾನೆ ಬಲಗಾಲಿಗೆ ತುಳಿದ ಪರಿಣಾಮ ಕಾಲಿನ ಮೂಳೆ ಮುರಿದು ಗಂಭೀರ ಗಾಯಗೊಂಡಿದ್ದಾರೆ.
ಗಾಯಗೊಂಡ ಮಲ್ಲೇಶ್ ಅವರನ್ನು ಸ್ಥಳೀಯರು ತಕ್ಷಣ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಹೇಮಂತ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಒಂಟಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ರೈತರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕಾಡಾನೆಗಳ ಹಾವಳಿಯನ್ನು ನಿಯಂತ್ರಿಸಿ ಜನರ ಸುರಕ್ಷತೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
