ಹಾಸನ: ದೇಹಕ್ಕೆ ಆಗುವ ಗಾಯವನ್ನು ವಿಜ್ಞಾನದಿಂದ ಪರಿಹರಿಸಬಹುದು ಆದರೆ ಮನಸ್ಸಿಗೆ ಆಗುವ ಗಾಯಗಳಿಂದ ಮುಕ್ತಿ ಪಡೆಯಲು ಸಾಹಿತ್ಯ ಅತ್ಯವಶ್ಯವಾಗಿದೆ ಎಂದು ಲೇಖಕ ಜೋಗಿ ಅವರು ಹೇಳಿದರು.
ನಗರದ ವಿಜಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ The Hassan Literature Festival 2026 (THLF) ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಪುಸ್ತಕ ಮಹತ್ವದ್ದಾಗಿದೆ. ಮನಸ್ಸಿನ ನೋವುಗಳನ್ನು ಮರೆಯಲು ಪುಸ್ತಕ ನೆರವಾಗುತ್ತದೆ ಎಂದರು.
ವಿದ್ಯಾರ್ಥಿಗಳು ಈಗಿನಿಂದಲೇ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಮೈಸೂರು, ಬೆಂಗಳೂರಿನಲ್ಲಿ ನಡೆಯುವ ಸಾಹಿತ್ಯೋತ್ಸವ ಮಾದರಿಯಲ್ಲಿ ಹಾಸನದಲ್ಲೂ ಈ ವರ್ಷದಿಂದ ಸಾಹಿತ್ಯೋತ್ಸವ ಪ್ರಾರಂಭವಾಗಬೇಕು. ಅದಕ್ಕೆ ವಿಜಯ ಶಾಲೆ ಮುನ್ನುಡಿ ಬರೆದಿದೆ ಎಂದರು.
ಜೈಪುರ ಸಾಹಿತ್ಯೋತ್ಸವ ದೇಶದ ಗಮನ ಸೆಳೆದಿದೆ.
ಸಾಹಿತ್ಯ ಮಕ್ಕಳಿಂದ ಶುರುವಾಗಬೇಕು ಎನ್ನುವುದನ್ನು ಅಲ್ಲಿ ನಾನು ಕಲಿತಿದ್ದೇನೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಮಕ್ಕಳು ಕಥೆ, ಕವನಗಳೊಂದಿಗೆ ಹಾಜರಾಗುತ್ತಾರೆ. ನಮಿತಾ, ವಿಲಿಯಂ, ಸಂಜಯ್ ಎಂಬುವವರು ಜೈಪುರ ಸಾಹಿತ್ಯೋತ್ಸವ ಕೇವಲ ಒಂಬತ್ತು ಜನ ಪ್ರೇಕ್ಷಕರೊಂದಿಗೆ ಶುರು ಮಾಡಿದರು. ಆದರೆ ಇಂದು ಐದು ಲಕ್ಷ ಜನರು ಭಾಗವಹಿಸುತ್ತಾರೆ. ಸಣ್ಣ ಸಣ್ಣ ಆರಂಭಗಳು ನಂತರದ ದಿನಗಳಲ್ಲಿ ದೊಡ್ಡ ಫಲಿತಾಂಶ ನೀಡುತ್ತವೆ ಎಂದರು.
ನಮ್ಮ ಅರಿವಿನ ಫರಿದಿ ಹೆಚ್ಚಬೇಕೆಂದರೆ ಓದುವುದನ್ನು ಕಲಿಯಬೇಕು. ಸಾಹಿತ್ಯ ಒಡೆದ ಹೃದಯ ಜೊಡಿಸುತ್ತದೆ. ಅದಕ್ಕೆ ಸಾಹಿತ್ಯದಲ್ಲಿ ಪರಿಹಸರವಿದೆ. ಹಾಸನ ಜಿಲ್ಲೆಯವರೇ ಆದ ಎಸ್.ಎಲ್. ಭೈರಪ್ಪ, ಬೂಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರನ್ನು ವಿದ್ಯಾರ್ಥಿಗಳು ಪ್ರೇರಣೆಯಾಗಿ ಪಡೆಯಬೇಕೆಂದರು.
