ಶ್ರವಣಬೆಳಗೊಳ: ಶ್ರೀಕ್ಷೇತ್ರ ಶ್ರವಣಬೆಳಗೊಳ ದಿಗಂಬರ ಜೈನಮಹಾಸಂಸ್ಥಾನ ಮಠದ ಸಂಚಾಲಿತ ಅಂಬಿಕಾ ವಿದ್ಯಾಲಯದ ಅತ್ಯಾಧುನಿಕ ನೂತನ ಕಟ್ಟಡವನ್ನು ಕೇಂದ್ರ ಉಕ್ಕು ಮತ್ತು ಭಾರಿ ಕೈಗಾರಿಕೆಗಳ ಸಚಿವ ಎಚ್.ಡಿ. ಕುಮಾರಸ್ವಾಮಿ ನೂತನ ಕಟ್ಟಡವನ್ನು ಉದ್ಘಾಟಿಸಿದರು,ಸಮಾರಂಭ ಗೊಮ್ಮಟನಗರದ ಬಾಹುಬಲಿ ತಾಂತ್ರಿಕ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಿತು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರಿಗೆ ವೀರ ಮಾರ್ತಾಂಡ ಚಾವುಂಡರಾಯ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೇಶದಿಂದ 1982ರಲ್ಲಿ ಅಂದಿನ ಜಗದ್ಗುರು ಸ್ವಸ್ತಿಶ್ರೀ ಕರ್ಮಯೋಗಿ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರಿಂದ ಅಂಬಿಕಾ ವಿದ್ಯಾಲಯ ಆರಂಭಗೊಂಡಿತ್ತು. ಕೆಲವೇ ವಿದ್ಯಾರ್ಥಿಗಳೊಂದಿಗೆ ಆರಂಭವಾದ ಸಂಸ್ಥೆಯಲ್ಲಿ ಇಂದು 1,500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಸಂಸ್ಥೆಯು 44 ವರ್ಷಗಳ ಶೈಕ್ಷಣಿಕ ಸೇವೆಯನ್ನು ಪೂರೈಸಿರುವ ಸಂದರ್ಭದಲ್ಲಿ, ವಿದ್ಯಾರ್ಥಿಗಳಿಗೆ ಸುಸಜ್ಜಿತ ಕಲಿಕಾ ವಾತಾವರಣ ಕಲ್ಪಿಸುವ ಉದ್ದೇಶದಿಂದ ಸುಮಾರು 90 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ.
ಮೈಸೂರು ಜಿಲ್ಲೆಯ ಕನಕಗಿರಿ ಜೈನ ಮಠದ
ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾಸ್ವಾಮಿ ಪಾವನ ಸಾನ್ನಿಧ್ಯದಲ್ಲಿ ಹಾಗೂ ಶ್ರವಣಬೆಳಗೊಳ ಮಠದ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ಸಮಾರಂಭ ನೆರವೇರಿತು.
ಶಾಸಕ ಸಿ.ಎನ್. ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದು ಮಹಾರಾಷ್ಟ್ರದ ರಾಜ್ಯಸಭಾ ಸದಸ್ಯ ರಾಜೇಂದ್ರ ಜೈನ್, ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಶಾಸಕ ಸ್ವರೂಪ್ ಪ್ರಕಾಶ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
