ಹಾಸನ: ಗೌರಿ-ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ವೇಳೆ ಮದ್ಯದ ಅಮಲಿನಲ್ಲಿ ಕೆರೆಗೆ ಹಾರಿದ ವ್ಯಕ್ತಿ ಕೆಸರಿನಲ್ಲಿ ಸಿಲುಕಿ ಮೃತಪಟ್ಟಿರುವ ಘಟನೆ ಚನ್ನರಾಯಪಟ್ಟಣ ತಾಲ್ಲೂಕಿನ ಅವ್ವೇರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗೌರಿ-ಗಣೇಶ ಮೂರ್ತಿಗಳನ್ನು ಅದ್ದೂರಿ ಮೆರವಣಿಗೆಯಲ್ಲಿ ಕೆರೆಗೆ ಕೊಂಡೊಯ್ದು ವಿಸರ್ಜಿಸಲು ನೂರಾರು ಮಂದಿ ತೆರಳುತ್ತಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಆನಂದ್ (35) ಎಂಬಾತ ಮೂರ್ತಿಗಳ ವಿಸರ್ಜನೆಗೂ ಮುನ್ನವೇ ಕೆರೆಗೆ ಹಾರಿದ್ದಾನೆ ಎನ್ನಲಾಗಿದೆ. ಕೆರೆಯ ಕೆಸರಿನಲ್ಲಿ ಸಿಲುಕಿದ ಆತ ಮೇಲೆ ಬರಲಾಗದೆ ಉಸಿರುಗಟ್ಟಿ ಮೃತಪಟ್ಟಿದ್ದಾನೆ.
ಘಟನೆ ಗಮನಿಸಿದ ಜೊತೆಯಲ್ಲಿದ್ದವರು ಕೆರೆಯಲ್ಲಿ ಶೋಧ ನಡೆಸಿ ಆನಂದ್ನನ್ನು ಹೊರತೆಗೆದಿದ್ದಾರೆ. ಕೂಡಲೇ ನುಗ್ಗೇಹಳ್ಳಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚನ್ನರಾಯಪಟ್ಟಣ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ, ಅಷ್ಟರಲ್ಲಾಗಲೇ ಆನಂದ್ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನುಗ್ಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
