ಹಾಸನ:ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ವಿರುದ್ಧ ಶಾಸಕ ಎಚ್.ಪಿ. ಸ್ವರೂಪ್ಪ್ರಕಾಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಾಸನ ಮಹಾನಗರಪಾಲಿಕೆ ವ್ಯಾಪ್ತಿಯ ದೊಡ್ಡಮಂಡಿಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸ್ಥಳೀಯರ ಸಮಸ್ಯೆಗಳಿಗೆ ಸ್ಪಂದಿಸದೆ, ಸಂಬಂಧಪಟ್ಟ ಅಧಿಕಾರಿಗಳು ಬಂದಿಲ್ಲ ಎಂಬ ಕಾರಣಕ್ಕೆ ಸಚಿವರು ವಾಪಸ್ ತೆರಳಿದ್ದಾರೆ ಎಂದು ಆರೋಪಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು, ಸಚಿವರ ಭೇಟಿಯ ಕುರಿತು ಮಹಾನಗರಪಾಲಿಕೆ ಆಯುಕ್ತರು ಮಾಹಿತಿ ನೀಡಿದ್ದರು. ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ ಎಂಬ ನಿರೀಕ್ಷೆಯಿಂದ ಸುಮ್ಮನಿದ್ದೆ. ಆದರೆ, ಸಚಿವರಿಗೆ ₹185 ಕೋಟಿ ಅನುದಾನದ ಕುರಿತು ಯಾರು ತಪ್ಪು ಮಾಹಿತಿ ನೀಡಿದ್ದಾರೆ ಎಂಬುದು ಗೊತ್ತಿಲ್ಲ. ಈ ಅನುದಾನಕ್ಕೆ ಸಂಬಂಧಿಸಿದಂತೆ ಈವರೆಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕಿತ್ತು ಎಂದು ಹೇಳಿದರು.
ಮಹಾನಗರಪಾಲಿಕೆ ವ್ಯಾಪ್ತಿಗೆ 35 ವಾರ್ಡ್ಗಳು ಹಾಗೂ 53 ಗ್ರಾಮಗಳು ಸೇರ್ಪಡೆಯಾಗಿದ್ದು, ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅಧಿಕಾರಿಗಳು ಕ್ರಿಯಾ ಯೋಜನೆ ರೂಪಿಸಿದ್ದಾರೆ. ಆದರೆ, ದೊಡ್ಡಮಂಡಿಗನಹಳ್ಳಿ ಗ್ರಾಮಕ್ಕೆ ಸಚಿವರು ಭೇಟಿ ನೀಡುವ ಬಗ್ಗೆ ಸ್ಥಳೀಯರಿಗೆ ಮಾಹಿತಿಯೇ ಇರಲಿಲ್ಲ. ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ಸ್ಥಳೀಯರಿಗೇ ಚೆನ್ನಾಗಿ ತಿಳಿದಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ಕರೆದುಕೊಂಡು ಬಂದು ಕ್ರಿಯಾ ಯೋಜನೆ ರೂಪಿಸುವುದಾದರೆ ಹೇಗೆ ಎಂದು ಪ್ರಶ್ನಿಸಿದರು.
ರಸ್ತೆಯ ಗುಂಡಿಗಳನ್ನು ಮುಚ್ಚುವಂತೆ ಮನವಿ ಮಾಡಿದವರ ಮೇಲೆಯೇ ಸಚಿವರು ರೇಗಾಡಿದ್ದಾರೆ. ಇಂಜಿನಿಯರ್ಗಳು ತಮ್ಮ ಮಾತು ಹೇಳುವುದನ್ನು ಕೇಳುವ ತಾಳ್ಮೆಯೂ ಇರಲಿಲ್ಲ. ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳದಿದ್ದರೆ ಅಭಿವೃದ್ಧಿ ಕೆಲಸಗಳು ಹೇಗೆ ನಡೆಯುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಳಿಗ್ಗೆಯಿಂದ ಸಂಜೆಯವರೆಗೆ ಕಾರ್ಯಕ್ರಮ ನಿಗದಿಪಡಿಸಿಕೊಂಡಿದ್ದ ಸಚಿವರು, ಒಂದು ವಾರ್ಡ್ಗೆ ಭೇಟಿ ನೀಡಿ ವಾಪಸ್ ತೆರಳಿದ್ದಾರೆ. ಸಂಬಂಧಪಟ್ಟ ಇಂಜಿನಿಯರ್ಗಳು ಸ್ಥಳಕ್ಕೆ ಬಂದಿಲ್ಲ ಎಂಬ ಕಾರಣ ನೀಡಿ ಗ್ರಾಮಸ್ಥರ ಬೇಡಿಕೆಗಳಿಗೆ ಉತ್ತರಿಸದೆ ತೆರಳಿರುವುದು ಸರಿಯಲ್ಲ. ಇದು ಪೂರ್ವನಿಯೋಜಿತ ಕಾರ್ಯಕ್ರಮವಾಗಿದ್ದರೂ ಅಗತ್ಯ ಅಧಿಕಾರಿಗಳು ಸ್ಥಳದಲ್ಲಿರದಿರುವುದು ಯಾರ ವೈಫಲ್ಯ ಎಂದು ಪ್ರಶ್ನಿಸಿದರು.
ಮಹಾನಗರಪಾಲಿಕೆ ಆಯುಕ್ತರ ಮೇಲೆ ರೇಗಾಡುವ ಬದಲು, ಎಲ್ಲ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರುವಂತೆ ಸಚಿವರು ತಮ್ಮ ಆಪ್ತ ಕಾರ್ಯದರ್ಶಿ ಮೂಲಕವೂ ಸೂಕ್ತ ಸೂಚನೆ ನೀಡಬಹುದಿತ್ತು. ಕೆಲಸ ಮಾಡುವ ಇಚ್ಛಾಶಕ್ತಿ ಇದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ. ಈ ರೀತಿಯ ವರ್ತನೆ ಮತ್ತು ಹೇಳಿಕೆಗಳಿಂದ ಜನರಿಗೆ ಏನು ಸಂದೇಶ ನೀಡಿದಂತಾಗುತ್ತದೆ ಎಂದು ಪ್ರಶ್ನಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಈ ಮಟ್ಟದಲ್ಲಿ ವರ್ತಿಸಿದರೆ ಬೇಸರವಾಗುತ್ತದೆ. ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಬದಲು ಕೇವಲ ಭೇಟಿ ನೀಡಿ ವಾಪಸ್ ತೆರಳುವುದಾದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ. ಇಂತಹ ಸಚಿವರು ಜಿಲ್ಲೆಗೆ ಸಿಕ್ಕಿರುವುದು ದುರದೃಷ್ಟಕರ ಎಂದು ಶಾಸಕ ಎಚ್.ಪಿ. ಸ್ವರೂಪ್ಪ್ರಕಾಶ್ ಆಕ್ರೋಶ ವ್ಯಕ್ತಪಡಿಸಿದರು.
