ಹಾಸನ: ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ರೈಲುಗಳ ವ್ಯವಸ್ಥೆ ಮಾಡುವಂತೆ ಸಂಸದ ಶ್ರೇಯಸ್ ಎಂ. ಪಟೇಲ್ ಅವರು ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಸಲ್ಲಿಸಿದ್ದ ಮನವಿಗೆ ಸಕಾರಾತ್ಮಕ ಸ್ಪಂದನೆ ದೊರೆತಿದೆ.

ಸಂಸದರ ಮನವಿಯ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆಯು ಹಾಸನಾಂಬ ಮಹೋತ್ಸವ–2026ರ ಸಂದರ್ಭದಲ್ಲಿ ಭಕ್ತಾದಿಗಳ ಅನುಕೂಲಕ್ಕಾಗಿ ಬೆಂಗಳೂರು–ಹಾಸನ–ಬೆಂಗಳೂರು ಹಾಗೂ ಅರಸೀಕೆರೆ–ಹಾಸನ–ಅರಸೀಕೆರೆ ಮಾರ್ಗಗಳಲ್ಲಿ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿದೆ.

ವಿಶೇಷ ರೈಲುಗಳ ವಿವರ

1. ಬೆಂಗಳೂರು–ಹಾಸನ–ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ ರೈಲು (06573/06574)

ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಪ್ರತಿದಿನ ಸಂಚರಿಸಲಿದ್ದು, ಪ್ರತಿ ದಿಕ್ಕಿನಲ್ಲಿ 14 ಸಂಚಾರಗಳನ್ನು ನಡೆಸಲಿದೆ.

* ಬೆಂಗಳೂರು ನಿರ್ಗಮನ: ಬೆಳಿಗ್ಗೆ 7:30
* ಹಾಸನ ಆಗಮನ: ಬೆಳಿಗ್ಗೆ 11:30
* ಹಾಸನ ನಿರ್ಗಮನ: ಮಧ್ಯಾಹ್ನ 3:15
* ಬೆಂಗಳೂರು ಆಗಮನ: ಸಂಜೆ 7:00

ಈ ರೈಲು ಯಶವಂತಪುರ, ನೆಲಮಂಗಲ, ಕುಣಿಗಲ್, ಯಡಿಯೂರು, ಬಿ.ಜಿ. ನಗರ, ಶ್ರವಣಬೆಳಗೊಳ ಹಾಗೂ ಚನ್ನರಾಯಪಟ್ಟಣ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

2. ಅರಸೀಕೆರೆ–ಹಾಸನ–ಅರಸೀಕೆರೆ ಮೆಮು ವಿಶೇಷ ರೈಲು (06291/06292)

ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಸಂಚರಿಸಲಿದೆ.

* ಅರಸೀಕೆರೆ ನಿರ್ಗಮನ: ಬೆಳಿಗ್ಗೆ 11:30
* ಹಾಸನ ಆಗಮನ: ಮಧ್ಯಾಹ್ನ 12:30
* ಹಾಸನ ನಿರ್ಗಮನ: ಮಧ್ಯಾಹ್ನ 12:45
* ಅರಸೀಕೆರೆ ಆಗಮನ: ಮಧ್ಯಾಹ್ನ 2:00

ಈ ರೈಲು ಹಬ್ಬನಘಟ್ಟ ಹಾಗೂ ಬಾಗೇಶಪುರ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರುತ್ತದೆ.

ಕೇಂದ್ರ ರೈಲ್ವೆ ಸಚಿವರು ಹಾಗೂ ರೈಲ್ವೆ ಅಧಿಕಾರಿಗಳಿಗೆ ಸಂಸದ ಶ್ರೇಯಸ್ ಎಂ. ಪಟೇಲ್ ಧನ್ಯವಾದ

ಈ ಕುರಿತು ಪ್ರತಿಕ್ರಿಯಿಸಿರುವ ಸಂಸದ ಶ್ರೇಯಸ್ ಎಂ. ಪಟೇಲ್ ಅವರು,

“ಹಾಸನಾಂಬ ಮಹೋತ್ಸವವು ನಮ್ಮ ಜಿಲ್ಲೆಯ ಅತ್ಯಂತ ಪ್ರಮುಖ ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು ದೇವಿಯ ದರ್ಶನಕ್ಕೆ ಆಗಮಿಸುತ್ತಾರೆ.

ಭಕ್ತಾದಿಗಳ ಸುಗಮ ಪ್ರಯಾಣಕ್ಕಾಗಿ ವಿಶೇಷ ರೈಲುಗಳ ವ್ಯವಸ್ಥೆ ಮಾಡುವಂತೆ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿದ್ದೆ.

ನನ್ನ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಎರಡು ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಿರುವುದು ಅತ್ಯಂತ ಸಂತಸ ತಂದಿದೆ.

ನನ್ನ ಮನವಿಗೆ ಸ್ಪಂದಿಸಿದ ಮಾನ್ಯ ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವರಾದ ಶ್ರೀ ವಿ. ಸೋಮಣ್ಣ, ನೈಋತ್ಯ ರೈಲ್ವೆಯ ಮಹಾಪ್ರಬಂಧಕರು, ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು (DRM), ಸಂಬಂಧಪಟ್ಟ ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ವಿಶೇಷ ರೈಲುಗಳ ಸಂಚಾರಕ್ಕೆ ಸಹಕರಿಸಿದ ಎಲ್ಲಾ ರೈಲ್ವೆ ಸಿಬ್ಬಂದಿಗೆ ಹಾಸನ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಹೃತ್ಪೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

 

ಈ ವಿಶೇಷ ರೈಲು ಸೇವೆಗಳು ಹಾಸನಾಂಬ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿವೆ. ಸಾರ್ವಜನಿಕರು ಈ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕು.

ಶ್ರೇಯಸ್ ಎಂ. ಪಟೇಲ್
ಸಂಸದ

Leave a Reply

Your email address will not be published. Required fields are marked *