ಹಾಸನ: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಮನೆಗೆ ತೆರಳಿದ್ದ ಶಿಕ್ಷಕಿ ಹಾಗೂ ಬಿಡಿಸಲು ಬಂದ ಎಂಟು ಜನರ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿವೆ. ಮತ್ತೊಂದು ಪ್ರಕರಣಲ್ಲಿ ದ್ವಿಚಕ್ರ ವಾಹನದಿಂದ ಬಿದ್ದು ಶಿಕ್ಷಕಿಯೊಬ್ಬರು ಗಾಯಗೊಂಡಿದ್ದಾರೆ.
ಬೇಲೂರು ಪಟ್ಟಣದ ನೆಹರು ನಗರ ಜೈಭೀಮ್ ನಗರದಲ್ಲಿ ಜಿಎಚ್‌ಪಿಎಸ್ ಶಾಲೆಯ ಶಿಕ್ಷಕಿ ಚಿಕ್ಕಮ್ಮ, ಸಮೀಕ್ಷೆಯ ಕೊನೆಯ ದಿನ ಪತಿ ಶಿವಕುಮಾರ್ ಜೊತೆ ನವೀನ್ ಎಂಬುವರ ಮನೆಗೆ ತೆರಳಿದ ಸಂದರ್ಭದಲ್ಲಿ ಹತ್ತಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ನಡೆಸಿವೆ.
ದಾಳಿಯಲ್ಲಿ ಶಿಕ್ಷಕಿ ಚಿಕ್ಕಮ್ಮನ ಮುಖ, ಕೈ, ಕಾಲು, ದೇಹದ ಹಲವು ಭಾಗಗಳಿಗೆ ಗಾಯಗಳು ಉಂಟಾಗಿದ್ದು, ಪತಿಗೂ ನಾಯಿಗಳು ಕಚ್ಚಿವೆ.
ಪತಿ-ಪತ್ನಿಯನ್ನು ರಕ್ಷಿಸಲು ಬಂದ ಧರ್ಮ, ಪೃಥ್ವಿ, ಸಚಿನ್ ಸೇರಿದಂತೆ ಏಳು ಮಂದಿಗೂ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಅಲ್ಲೇ ಆಟವಾಡುತ್ತಿದ್ದ ಐದು ವರ್ಷದ ಬಾಲಕ ಕಿಶನ್ ಮೇಲೂ ದಾಳಿ ನಡೆಸಿವೆ. ಎಲ್ಲ ಗಾಯಾಳುಗಳು ಬೇಲೂರು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತದಲ್ಲಿ ಶಿಕ್ಷಕಿಗೆ ಗಾಯ:
ಹೊಳೆನರಸೀಪುರ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಮತ್ತೊಂದು ಘಟನೆ ನಡೆದಿದೆ. ವಡ್ಡರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ರಾಧಾ, ಜನಗಣತಿ ಕಾರ್ಯಕ್ಕಾಗಿ ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಬೀದಿ ನಾಯಿ ಅಡ್ಡ ಬಂದ ಪರಿಣಾಮ ಅಪಘಾತ ಸಂಭವಿಸಿದೆ.
ನಾಯಿ ಸ್ಕೂಟರ್‌ಗೆ ಸಿಲುಕಿಕೊಂಡಿದ್ದು, ಶಿಕ್ಷಕಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣ ನೆರವಿಗೆ ಧಾವಿಸಿ ಶಿಕ್ಷಕಿಯನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
