ಹಾಸನ: ನಾಡಿನ ಖ್ಯಾತ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಕಲಾವಿದ, ರೈತ ಸಂಘ ಮತ್ತು ದಲಿತ ಸಂಘರ್ಷ ಸಮಿತಿಯ ಹಿರಿಯ ಕಾರ್ಯಕರ್ತ ಕೆ.ಟಿ. ಶಿವಪ್ರಸಾದ್ (77) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇತ್ತೀಚೆಗೆ ಅವರು ದೀರ್ಘ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಖ್ಯಾತ ಉದ್ಯಮಿ ದಿವಂಗತ ಕಾರ್ಲೆ ಅವರ ಪುತ್ರರಾಗಿದ್ದ ಶಿವಪ್ರಸಾದ್ ಅವರು, ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಪರಮಾಪ್ತ ಸ್ನೇಹಿತರಾಗಿಯೂ ಗುರುತಿಸಿಕೊಂಡಿದ್ದರು. ಕಲೆ, ಸಾಮಾಜಿಕ ಹೋರಾಟ ಮತ್ತು ರೈತಪರ ಚಳವಳಿಗಳಲ್ಲಿ ಅವರು ಸಕ್ರಿಯವಾಗಿ ತೊಡಗಿಸಿಕೊಂಡು ವಿಶಿಷ್ಟ ಸೇವೆ ಸಲ್ಲಿಸಿದ್ದರು.
ಕೆ.ಟಿ. ಶಿವಪ್ರಸಾದ್ ಅವರ ನಿಧನಕ್ಕೆ ಕಲಾ, ಸಾಹಿತ್ಯ, ರೈತ ಹಾಗೂ ಸಾಮಾಜಿಕ ವಲಯದ ಅನೇಕ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
