ಸಕಲೇಶಪುರ: ವಿದ್ಯುತ್ ಲೈನ್ ದುರಸ್ತಿ ಕಾರ್ಯ ಮುಗಿಸಿ ವಾಪಸಾಗುತ್ತಿದ್ದ ಸೆಸ್ಕಾಂ ಸಿಬ್ಬಂದಿ ವಾಹನದ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಘಟನೆ ತಾಲೂಕಿನ ಯಸಳೂರು ಶಾಖೆ ವ್ಯಾಪ್ತಿಯ ಲಕ್ಕುಂದ ಗ್ರಾಮದ ಸಮೀಪ ಮಂಗಳವಾರ ತಡರಾತ್ರಿ ಸಂಭವಿಸಿದೆ.

ಯಸಳೂರು ಶಾಖೆಯ ಶಾಖಾಧಿಕಾರಿ ಮಂಜುನಾಥ್ ಹಾಗೂ ಪವರ್‌ಮ್ಯಾನ್ ರಾತ್ರಿ ಸುಮಾರು 1.30ರ ವೇಳೆಗೆ ವಿದ್ಯುತ್ ಲೈನ್ ಟ್ರಬಲ್ ಸರಿಪಡಿಸಿ ವಾಹನದಲ್ಲಿ ಹಿಂದಿರುಗುತ್ತಿದ್ದ ವೇಳೆ ಏಕಾಏಕಿ ಒಂಟಿ ಸಲಗ ರಸ್ತೆಗಿಳಿದು ವಾಹನದತ್ತ ದೌಡಾಯಿಸಿದೆ. ಕ್ಷಣಮಾತ್ರದಲ್ಲಿ ಎಚ್ಚೆತ್ತುಕೊಂಡ ಸಿಬ್ಬಂದಿ ಸಮಯಪ್ರಜ್ಞೆ ಮೆರೆದು ವಾಹನವನ್ನು ನಿಯಂತ್ರಿಸಿ ಸ್ಥಳದಿಂದ ಸುರಕ್ಷಿತವಾಗಿ ತೆರಳಿದ ಪರಿಣಾಮ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದೆ.

ಘಟನೆಯ ದೃಶ್ಯ ವಾಹನದಲ್ಲಿದ್ದ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ರಾತ್ರಿ ವೇಳೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಕಾಡಾನೆಗಳ ಹಾವಳಿಯಿಂದ ಎದುರಾಗುತ್ತಿರುವ ಜೀವಭಯದೊಂದಿಗೆ ಕರ್ತವ್ಯ ನಿರ್ವಹಿಸುವಂತಾಗಿದೆ.

ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ. “ದೇವರ ಕೃಪೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದೇವೆ” ಎಂದು ಸಿಬ್ಬಂದಿ ತಿಳಿಸಿದ್ದಾರೆ. ರಾತ್ರಿ ವೇಳೆ ವಿದ್ಯುತ್ ದುರಸ್ತಿ ಕಾರ್ಯಕ್ಕೆ ತೆರಳುವ ಸಿಬ್ಬಂದಿಗೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ ಎಂಬ ಅಭಿಪ್ರಾಯ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *