ಹಾಸನ: ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರ ಧರ್ಮಪತ್ನಿ ಚನ್ನಮ್ಮ (84) ಅವರ ನಿಧನ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.
ಜುಲೈ 18ರಂದು ಚನ್ನಮ್ಮ ಅವರು ನಿಧನರಾಗಿದ್ದು, ಅಂತ್ಯಸಂಸ್ಕಾರ ಜುಲೈ 20ರಂದು ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜುಲೈ 19ರ ಭಾನುವಾರ ಬೆಳಗ್ಗೆ 6 ಗಂಟೆಯಿಂದ ಜುಲೈ 20ರ ಸೋಮವಾರ ಮಧ್ಯಾಹ್ನ 12 ಗಂಟೆಯವರೆಗೆ ಜಿಲ್ಲೆಯಾದ್ಯಂತ ಡ್ರೈ ಡೇ (ಮದ್ಯ ಮಾರಾಟ ನಿಷೇಧ) ಘೋಷಿಸಲಾಗಿದೆ.
ಈ ಅವಧಿಯಲ್ಲಿ ಜಿಲ್ಲೆಯ ಎಲ್ಲಾ ಮದ್ಯದ ಅಂಗಡಿಗಳು, ಬಾರ್‌ಗಳು, ಕ್ಲಬ್‌ಗಳು ಹಾಗೂ ವೈನ್‌ಶಾಪ್‌ಗಳು ಮುಚ್ಚಿರಲಿವೆ. ಜೊತೆಗೆ ಧಾಬಾಗಳು, ಹೋಟೆಲ್‌ಗಳು ಹಾಗೂ ರೆಸಾರ್ಟ್‌ಗಳಲ್ಲಿ ಮದ್ಯ ಸೇವೆ ಮತ್ತು ಸರಬರಾಜಿಗೂ ನಿಷೇಧ ವಿಧಿಸಲಾಗಿದೆ.
ಆದೇಶವನ್ನು ಉಲ್ಲಂಘಿಸುವವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ ಹಾಗೂ ಸಂಬಂಧಿತ ಕಾನೂನುಗಳಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಕೆ ನೀಡಿದ್ದಾರೆ.
