ಹಾಸನ: ಆಲೂರು ತಾಲ್ಲೂಕಿನ ಕುಂದೂರು ಹೋಬಳಿ ಸುಳಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಕೆ.ಎಲ್. ಪುರುಷೋತ್ತಮ ಅವರಿಗೆ ರಾಜ್ಯ ಶಿಕ್ಷಕರ ಪ್ರಶಸ್ತಿ ಘೋಷಣೆಯಾಗಿದೆ.
ಸೆಪ್ಟೆಂಬರ್ 5ರಂದು ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಸಮ್ಮುಖದಲ್ಲಿ ಈ ಪ್ರಶಸ್ತಿ ಪ್ರದಾನವಾಗಲಿದೆ.
ಪುರುಷೋತ್ತಮ ಅವರು ತಮ್ಮ ಶಾಲೆಯ ಮಕ್ಕಳಿಗಾಗಿ 7.71 ಲಕ್ಷ ರೂ. ಮೌಲ್ಯದ ಶಾಲಾ ವಾಹನವನ್ನು ಯಾರ ಸಹಾಯವೂ ಬೇಡದೆ ಸ್ವತಃ ಹಣ ಸಂಗ್ರಹಿಸಿ ಖರೀದಿಸಿರುವುದು ವಿಶೇಷ. ವಾಹನವನ್ನನು ಸ್ವತಃ ಚಾಲನೆ ಮಾಡಿ ಹಳ್ಳಿ-ಹಳ್ಳಿಗೆ ತೆರಳಿ ಮಕ್ಕಳನ್ನು ಶಾಲೆಗೆ ಕರೆತರುವ ಮೂಲಕ ಶಿಕ್ಷಣದ ಹಕ್ಕನ್ನು ಬಾಗಿಲಿಗೆ ತಲುಪಿಸುತ್ತಿದ್ದಾರೆ.
ಅಲ್ಲದೇ ಶಾಲೆಗೆ ಸಿ.ಸಿ. ಕ್ಯಾಮೆರಾ, ಕಂಪ್ಯೂಟರ್, ಕಾಂಪೌಂಡ್ ವಾಲ್ ಸೇರಿದಂತೆ 8 ಲಕ್ಷಕ್ಕೂ ಹೆಚ್ಚು ವೆಚ್ಚದ ಸೌಲಭ್ಯಗಳನ್ನು ದಾನಿಗಳ ಸಹಕಾರದಿಂದ ತಂದಿದ್ದಾರೆ. ಒಂದು ಕಾಲದಲ್ಲಿ 30 ಮಕ್ಕಳು ಇದ್ದ ಶಾಲೆಯಲ್ಲಿ, ಅವರ ಪ್ರಯತ್ನದಿಂದ ಇಂದು 43 ಮಕ್ಕಳು ಓದುತ್ತಿದ್ದಾರೆ.ಹ
ಹೊನರಸೀಪುರ ತಾಲೂಕಿನ ಕಬ್ಬಿನಹಳ್ಳಿ ಮೂಲದ ಪುರುಷೋತ್ತಮ ಅವರು ನಿವೃತ್ತ ಮುಖ್ಯಶಿಕ್ಷಕರಾದ ಕೆ. ಲಕ್ಮೇಗೌಡ ಮತ್ತು ಎಚ್.ಕೆ. ರುಕ್ಮಿಣಿ ದಂಪತಿಗಳ ಪುತ್ರರು. ಅವರ ಸಹೋದರರೂ ಶಿಕ್ಷಕರೇ ಆಗಿದ್ದು, ಈ ಗೌರವ ದೊರೆತಿರುವುದು ಹಾಸನ ಜಿಲ್ಲೆಗೆ ಹಾಗೂ ಶಿಕ್ಷಕರ ಸಮುದಾಯಕ್ಕೆ ಹೆಮ್ಮೆ ತಂದಿದೆ.