ಹಾಸನ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ 1ರ ಬೂವನಹಳ್ಳಿಯಲ್ಲಿ ಮೂಲಸೌಕರ್ಯ ಸಮಸ್ಯೆಗಳ ಕುರಿತು ಶಾಸಕ ಸ್ವರೂಪ್ ಅವರ ಅಧ್ಯಕ್ಷತೆಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಯಿತು.
ಗ್ರಾಮದಲ್ಲಿನ ಮೂಲಸೌಲಭ್ಯಗಳ ಕೊರತೆಯಿಂದ ಸಾರ್ವಜನಿಕರು ಎದುರಿಸುತ್ತಿರುವ ತೊಂದರೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಈ ಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ನೂತನವಾಗಿ ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿರುವ ಬೂವನಹಳ್ಳಿಯ ಸಮಸ್ಯೆಗಳನ್ನು ಶಾಸಕರೆದುರು ಸ್ಥಳೀಯ ನಿವಾಸಿಗಳು ತೆರೆದಿಟ್ಟರು.ಸ
ಭೆಯಲ್ಲಿ ರಸ್ತೆ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ವಿದ್ಯುತ್ ದೀಪಗಳ ಅಳವಡಿಕೆ ಹಾಗೂ ಸ್ವಚ್ಛತೆ ಕುರಿತಂತೆ ಸ್ಥಳೀಯರು ಉನ್ನತ ಮಟ್ಟದ ಬೇಡಿಕೆಗಳನ್ನು ಮಂಡಿಸಿದರು. ಸಾರ್ವಜನಿಕರ ಮನವಿ ಆಲಿಸಿದ ಶಾಸಕರು, ಮೂಲಭೂತ ಸೌಕರ್ಯಗಳ ಕೊರತೆಯಿಂದ ಜನಜೀವನ ಹಾಳಾಗಬಾರದು. ಸಂಬಂಧಪಟ್ಟ ಇಲಾಖೆಯವರು ಶೀಘ್ರ ಕ್ರಮ ಕೈಗೊಂಡು ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಸೂಚಿಸಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಅನಗತ್ಯ ವಿಳಂಬವಾಗದಂತೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಪಾಲಿಸಿ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಸ್ತೆ ಅಭಿವೃದ್ಧಿ ಯೋಜನೆಗೆ ಪ್ರಾಮುಖ್ಯತೆ ನೀಡುವುದರೊಂದಿಗೆ, ಶುದ್ಧ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ತುರ್ತು ಯೋಜನೆಗಳನ್ನು ಸಿದ್ಧಪಡಿಸಲು ಸೂಚಿಸಿದರು.
ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತರು, ಎಂಜಿನಿಯರ್‌ಗಳು ಹಾಗೂ ವಿವಿಧ ವಿಭಾಗದ ಅಧಿಕಾರಿಗಳು ಭಾಗವಹಿಸಿ, ಬೂವನಹಳ್ಳಿಯ ಸಮಗ್ರ ಅಭಿವೃದ್ಧಿಗೆ ಅಗತ್ಯ ಯೋಜನೆಗಳನ್ನು ಪ್ರಸ್ತಾಪಿಸಿದರು.
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿದ ಶಾಸಕ ಸ್ವರೂಪ್, ಗ್ರಾಮದ ಜನತೆಗೆ ಉತ್ತಮ ಮೂಲಸೌಕರ್ಯ ಒದಗಿಸುವುದು ನಮ್ಮ ಜವಾಬ್ದಾರಿ. ಬೂವನಹಳ್ಳಿಯನ್ನು ಅಭಿವೃದ್ಧಿಯ ಮಾದರಿ ಕೇಂದ್ರವಾಗಿ ರೂಪಿಸಲು ಎಲ್ಲರ ಸಹಕಾರ ಅಗತ್ಯವಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮೂರ್ತಿ, ಜಿಪಂ ಮಾಜಿ ಉಪಾಧ್ಯಕ್ಷ ಸ್ವಾಮಿಗೌಡ, ತಾಪಂ ಮಾಜಿ ಸದಸ್ಯ ಜಯರಾಂ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ. ಆರ್ ಬೊಮ್ಮೇಗೌಡ,ಮುಖಂಡರಾದ ತುಳಸಿರಾಂ, ಮಲ್ಲೇಶ್, ಕರಿಯಯ್ಯ, ಲಕ್ಷಣ್,ಸಂಕೇನಹಳ್ಳಿ ವೇಣು, ಸೋಮೇಶ್ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಇತರರು ಹಾಜರಿದ್ದರು.