ಚನ್ನರಾಯಪಟ್ಟಣ: ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಸ್ಥಾಪಿಸಿರುವ ಡಾ. ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಜ.26 ರಂದು ಅನಾವರಣ ಮಾಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಅಂದು ನಗರದ ಎಲ್ಲಾ ರಸ್ತೆ ಹಾಗೂ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಿದ್ದು ಹಬ್ಬದಂತೆ ಆಚರಿಸಲಾಗುವುದು ಎಂದರು.
ಬೆಳಗಿನ ಉಪಹಾರ ಹಾಗೂ ಮಧ್ಯಾಹ್ನ ಪಾಲ್ಗೊಳ್ಳುವ ಎಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗುವುದು. ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು. ಕಡ್ಡಾಯವಾಗಿ ಹಾಜರಿರಬೇಕು ಎಂದು ಸೂಚಿಸಿದರು.
ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವು ನಮ್ಮೆಲ್ಲರಿಗೂ ಬದುಕಿನ ದಾರಿದೀಪ ಹಾಗೂ ವರದಾನವಾಗಿದೆ. ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು ಸಹಬಾಳ್ವೆಯೊಂದಿಗೆ ಮುನ್ನಡೆಯುವುದು ಅಗತ್ಯವಿದೆ. ಅಂಬೇಡ್ಕರ್ ಅವರು ಒಂದೇ ಸಮುದಾಯಕ್ಕೆ ಸೀಮಿತವಾಗಿರುವ ವ್ಯಕ್ತಿಯಲ್ಲ. ಅವರು ವಿಶ್ವಮಾನವ ಎಂದು ವರ್ಣಿಸಿದರು.
ಅಂಬೇಡ್ಕರ್ ಅವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿ ಅನಾವರಣಗೊಳಿಸಲಾಗುವುದು. ಸುಮಾರು 20-25 ವರ್ಷಗಳ ಬೇಡಿಕೆ ಹಾಗೂ ನಮ್ಮೆಲ್ಲರ ಕನಸಾಗಿತ್ತು. ಸದ್ಯ ಈಡೇರಿದ್ದು ಆ ಸುದಿನಕ್ಕಾಗಿ ನಾವೆಲ್ಲರೂ ಕಾತುರರಾಗಿದ್ದೇವೆ ಎಂದರು.
ತಾಲ್ಲೂಕಿನ ಜನತೆ ಪಾಲ್ಗೊಂಡು ಅಂಬೇಡ್ಕರ್ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಕರೆ ನೀಡಿದರು.
ವಿವಿಧ ದಲಿತ ಪರ ಸಂಘಟನೆಗಳ ಮುಖಂಡರು ಪ್ರತಿಮೆ ಅನಾವರಣ ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಶಾಸಕರೊಂದಿಗೆ ಚರ್ಚಿಸಿದರು.
ಪುರಸಭಾ ಅಧ್ಯಕ್ಷ ಕೋಟೆ ಮೋಹನ್, ತಹಶೀಲ್ದಾರ್ ಶಂಕರಪ್ಪ, ಪುರಸಭಾ ಮುಖ್ಯಾಧಿಕಾರಿ ಯತೀಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರೀಶ್ ಇತರರಿದ್ದರು.

Leave a Reply

Your email address will not be published. Required fields are marked *