ಚನ್ನರಾಯಪಟ್ಟಣ: ನಾಪತ್ತೆಯಾಗಿದ್ದ ರೈತನ ಮೃತದೇಹ 23 ದಿನಗಳ ಬಳಿಕ ಹೇಮಾವತಿ ನಾಲೆಯಲ್ಲಿ ಪತ್ತೆಯಾಗಿದ್ದು, ಸಾಲಭಾದೆ ತಾಳಲಾರದೆ ಆತಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.
ತಾಲ್ಲೂಕಿನ ಡಿ.ಚಿಕ್ಕಗೊಂಡನಹಳ್ಳಿ ಗ್ರಾಮದ ಕಾಳೇಗೌಡ (57) ಮೃತರು. ನ. 24 ರಂದು ಮನೆಯಿಂದ ಹೊರ ಹೋಗಿದ್ದ ಅವರು ರಾತ್ರಿಯಾದರೂ ವಾಪಾಸ್‌‍ ಬಾರದ ಹಿನ್ನಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದ್ದರು. ಹೇಮಾವತಿ ಎಡದಂಡೆ ನಾಲೆ ಸಮೀಪದಲ್ಲಿ ಪಾದರಕ್ಷೆ, ಟವೆಲ್‌ ಹಾಗು ಜರ್ಕಿನ್‌ ಪತ್ತೆಯಾಗಿತ್ತು. ಶ್ರವಣಬೆಳಗೊಳ ಠಾಣೆ ಪೊಲೀರು ಹಾಗು ಅಗ್ನಿಶಾಮಕ ದಳ ಸಿಬ್ಬಂದಿ ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿರಲಿಲ್ಲ.
ಡಿ. 17ರ ಬುಧವಾರ ಶ್ರವಣಬೆಳಗೊಳ ಹೋಬಳಿ ಹೊಸಹಳ್ಳಿ ಗ್ರಾಮದ ಬಳಿ ಹೇಮಾವತಿ ನಾಲೆಯಲ್ಲಿ ಮೃತದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
1 ಎಕರೆ 10 ಗುಂಟೆ ಕೃಷಿ ಭೂಮಿ ಹೊಂದಿದ್ದ ಕಾಳೇಗೌಡ ಭೂಮಿಯನ್ನು ತಮ ಹೆಸರಿಗೆ ಮಂಜೂರು ಮಾಡಿಕೊಡುವಂತೆ ಜಿಲ್ಲಾಡಳಿತ ಹಾಗು ತಾಲ್ಲೂಕು ಆಡಳಿತಕ್ಕೆ 1982 ರಿಂದ ಅರ್ಜಿ ಸಲ್ಲಿಸಿದ್ದರೂ ಪ್ರಯೋಜನವಾಗಿರಲಿಲ್ಲ ಎನ್ನಲಾಗಿದೆ. ಡಿಂಡಗೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ 10 ಸಾವಿರ ರೂ., ಗ್ರಾಮೀಣ ಕೂಟದಲ್ಲಿ 1.50 ಲಕ್ಷ ರೂ., ಶ್ರೀ ಸಂತ್ಯಮ ಸ್ವಸಹಾಯ ಮಹಿಳಾ ಸಂಘದಲ್ಲಿ 1.50 ಲಕ್ಷ ರೂ., ಎಸ್‌‍ಎಂಎಫ್‌ಜಿ ಗ್ರಾಮ ಶಕ್ತಿ ಸಂಘದಲ್ಲಿ 50 ಸಾವಿರ ರೂ., ಬಿಎಸ್‌‍ಎಸ್‌‍ ಮೈಕ್ರೋ ಫೈನಾನ್‌್ಸನಲ್ಲಿ 1.2 ಲಕ್ಷ ರೂ., ಧರ್ಮಸ್ಥಳ ಸಂಘದಲ್ಲಿ 2 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಶ್ರವಣಬೆಳಗೊಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *