ಸಕಲೇಶಪುರ: ಬಿಸ್ಲೆ ಹಾಗೂ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಮಾರ್ಗದ ಬಿಸ್ಲೆ ಘಾಟ್ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದ ಪರಿಣಾಮ ವಾಹನ ಸವಾರರು ಆತಂಕದಲ್ಲಿ ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನ ಬಿಸ್ಲೆ ಸಮೀಪ ಅಡ್ಡ ಹೊಳೆ ಮತ್ತು ತೂಗು ಸೇತುವೆ ನಡುವೆ ಮಣ್ಣು ಕುಸಿದು ಬಿದ್ದಿದ್ದು, ವಾಹನ ಸಂಚಾರಕ್ಕೆ ತಕ್ಷಣದ ಅಡ್ಡಿ ಅಥವಾ ತೊಂದರೆಗಳಿಲ್ಲದಿದ್ದರೂ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ಜೀವವನ್ನು ಕೈಯಲ್ಲಿ ಹಿಡಿದುಕೊಂಡಂತೆಯೇ ಸಂಚರಿಸುವ ಸ್ಥಿತಿ ಉಂಟಾಗಿದೆ.ಭೂ
ಕುಸಿತದಲ್ಲಿ ಮಣ್ಣು ರಸ್ತೆಯ ಅಂಚಿನಲ್ಲಿ ಬಿದ್ದಿದ್ದು, ಮುಖ್ಯ ರಸ್ತೆಗೆ ಹರಿದು ಬರದ ಕಾರಣ ವಾಹನ ಸಂಚಾರ ಒಂದು ಬದಿಯಲ್ಲಿ ನಿಧಾನವಾಗಿ ಸಾಗುತ್ತಿದೆ. ಆದರೆ ಯಾವುದೇ ಸಂದರ್ಭದಲ್ಲಿಯೂ ಮಣ್ಣು ಇನ್ನಷ್ಟು ಕುಸಿದು ಸಂಪೂರ್ಣ ಮಾರ್ಗ ಮುಚ್ಚುವ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇದೆ.
ಸ್ಥಳೀಯ ದರು ವಿಷಯವನ್ನು ಕೂಡಲೇ ಸಾರ್ವಜನಿಕ ನಿರ್ಮಾಣ ಇಲಾಖೆಯ (ಪಿಡಬ್ಲ್ಯೂಡಿ) ಅಧಿಕಾರಿಗಳಿಗೆ ತಿಳಿಸಿದ ಪರಿಣಾಮ, ಸಿಬ್ಬಂದಿ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕುಸಿದು ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಸಂದರ್ಭದಲ್ಲಿ ಮೇಲಿನಿಂದ ಇನ್ನಷ್ಟು ಮಣ್ಣುಗಳು ಬೀಳುವ ಆತಂಕ ಇರುವುದರಿಂದ ಎಚ್ಚರಿಕೆಯಿಂದ ಕಾರ್ಯ ಮುಂದುವರಿಸುತ್ತಿದ್ದಾರೆ.
ಪ್ರತಿ ವರ್ಷ ಮಳೆಯ ಸಮಯದಲ್ಲಿ ಬಿಸ್ಲೆ ಘಾಟ್‌ನಲ್ಲಿ ಭೂಕುಸಿತ ಸಾಮಾನ್ಯವಾಗಿದ್ದು, ರಸ್ತೆ ಸಂಚಾರ ಅಡಚಣೆಗೊಳಗಾಗುತ್ತದೆ. ಇತ್ತೀಚೆಗೆ ಈ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ರಸ್ತೆ ಸಂಚಾರ ಅಡಚಣೆಗೊಳ್ಳದಂತೆ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.