ಹಾಸನ: ಕಾವೇರಿ ನೀರಾವರಿ ನಿಗಮಕ್ಕೆ ಸಾವಿರಾರು ಕೋಟಿ ರೂ.ನಷ್ಟವುಂಟು ಮಾಡುವ ಹುನ್ನಾರ ನಡೆಯುತ್ತಿದ್ದು ಉನ್ನತ ಮಟ್ಟದ ತನಿಖೆ ಮೂಲಕ ಸರ್ಕಾರಕ್ಕಾಗುವ ನಷ್ಟ ತಪ್ಪಿಸಬೇಕು ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಗ್ರಹಿಸಿದರು.
ಹೇಮಾವತಿ ಭೂ ಸಂತ್ರಸ್ತರ ಪರಿಹಾರ ವಿಚಾರದಲ್ಲಿ ಲೋಪವಾಗಿದೆ. 1986ರಲ್ಲಿ ಎಕರೆಗೆ ಐದರಿಂದ ಆರು ಸಾವಿರ ರೂಪಾಯಿ ಪರಿಹಾರ ನಿಗದಿ ಮಾಡಲಾಗಿತ್ತು. ಬಳಿಕ 2005ರಲ್ಲಿ ಮೇಲ್ಮನವಿಯಿಂದ ಅದನ್ನು ಎಕರೆಗೆ 30 ಸಾವಿರ ರೂಪಾಯಿಗೆ ಏರಿಸಲಾಗಿತ್ತು. ಈಗ 15–20 ವರ್ಷಗಳ ನಂತರ ಮತ್ತೆ ಜಿಲ್ಲಾ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಿ ಎಕರೆಗೆ 80 ಲಕ್ಷ ರೂಪಾಯಿವರೆಗೆ ಪರಿಹಾರ ಆದೇಶ ಪಡೆಯಲಾಗುತ್ತಿದೆ ಎಂದು ರೇವಣ್ಣ ಆರೋಪಿಸಿದರು.
ಈಗಾಗಲೇ 500 ಕ್ಕೂ ಹೆಚ್ಚು ಜನರು ಮೇಲ್ಮನವಿ ಸಲ್ಲಿಸಿದ್ದಾರೆ. ಈ ಪ್ರಕರಣಗಳು ಇತ್ಯರ್ಥವಾದರೆ ಸರ್ಕಾರಕ್ಕೆ ಸಾವಿರ ಕೋಟಿಗೂ ಹೆಚ್ಚು ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಭೂಸ್ವಾಧೀನ ಅಧಿಕಾರಿಗಳ ಕುಮ್ಮಕ್ಕಿನಿಂದ ಈ ರೀತಿಯ ಕ್ರಮ ನಡೆಯುತ್ತಿದೆ ಎಂದು ರೇವಣ್ಣ ಹೇಳಿದರು.
ಹಾಸನದ ಹಿಂದಿನ ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದರೂ ಕ್ರಮ ಕೈಗೊಳ್ಳಲಾಗಿಲ್ಲ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಆಗ್ರಹಿಸಿದ ರೇವಣ್ಣ, ಕೃಷ್ಣಭೈರೇಗೌಡರನ್ನು ಉಲ್ಲೇಖಿಸಿ, ಅವರು ಪ್ರಾಮಾಣಿಕರು, ಅವರ ಬಗ್ಗೆ ಲಘುವಾಗಿ ಮಾತನಾಡುವುದಿಲ್ಲ. ಆದರೆ ಅವರು ಪರಿಶೀಲನೆ ನಡೆಸಿ ನಷ್ಟವನ್ನು ತಡೆಯಬೇಕು. ಇಲ್ಲವಾದರೆ ಕಾವೇರಿ ನೀರಾವರಿ ನಿಗಮ ಬಾಗಿಲು ಹಾಕಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
