ಹಾಸನ: ಚಾಮುಂಡೇಶ್ವರಿ ಹಿಂದೂಗಳಿಗೆ ಸೇರಿಲ್ಲ ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ಖಂಡಿಸಿದ ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ, ತೆವಲಿನಿಂದ ಅವರು ಹಾಗೆ ಹೇಳಿದ್ದಾರೆ ಎಂದರು.
ರಾಜಕಾರಣಿಗಳ ನಿಲುವು ದೇಶದ ನಿಲುವಲ್ಲ, ಭಾಷೆಯ ನಿಲುವಲ್ಲ, ಧರ್ಮದ ನಿಲುವೂ ಅಲ್. ಅದು ಕೇವಲ ತೆವಲು. ದಿನನಿತ್ಯ ದೇವಸ್ಥಾನ, ಹೋಮ ಮಾಡುವವರು ಹಿಂದೂ ಸಂಪ್ರದಾಯವಲ್ಲ ಎನ್ನುವುದು ವೈರಾಗ್ಯವಲ್ಲ, ರಾಜಕೀಯ. ಬಸವ-ಶರಣರ ತತ್ವಗಳನ್ನು ಪಾಲಿಸುತ್ತಿದ್ದರೆ ಡಿ.ಕೆ. ಶಿವಕುಮಾರ್ ಇನ್ನು ಮುಂದೆ ದೇವಸ್ಥಾನಗಳಿಗೆ ಹೋಗಬಾರದು. ತಮ್ಮ ಧಾರ್ಮಿಕ ಚಿಂತನೆಗಳನ್ನು ತಮ್ಮಲ್ಲೇ ಇಟ್ಟುಕೊಳ್ಳಬೇಕು ಎಂದು ನಾರಾಯಣಗೌಡ ಕಿಡಿಕಾರಿದರು.
ಏಳುವರೆ ಕೋಟಿ ಕನ್ನಡಿಗರು ಭುವನೇಶ್ವರಿಯನ್ನು ಆರಾಧಿಸುತ್ತಿದ್ದಾರೆ. ಯಾರಾದರೊಬ್ಬರ ಅಭಿಪ್ರಾಯವನ್ನು ಇಡೀ ಕನ್ನಡಿಗರ ಭಾವನೆಗೆ ಹೋಲಿಕೆ ಮಾಡುವುದು ಸರಿಯಲ್ಲ. ನಾನು ಅಂತಹ ಹೇಳಿಕೆಯನ್ನು ತಿರಸ್ಕರಿಸುತ್ತೇನೆ. ದಸರಾ ಉದ್ಘಾಟನೆ ಮಾಡುವವರು ಕುಂಕುಮ, ಬಳೆ ಹಾಕಿಕೊಂಡೇ ಬರಬೇಕು ಎಂದು ನಾನು ಹೇಳುವುದಿಲ್ಲ. ಆದರೆ ಯಾವ ಧರ್ಮದವರು ಮತ್ತೊಂದು ಧರ್ಮವನ್ನು ಗೌರವಿಸುತ್ತಾರೋ, ಅರ್ಥಮಾಡಿಕೊಳ್ಳುತ್ತಾರೋ, ಅವರಿಗೆ ಇನ್ನಷ್ಟು ಗೌರವ ಸಿಗುತ್ತದೆ ಎಂದು ಹೇಳಿದರು.
ದಸರಾ ಹಿಂದೂಗಳ ಆರಾಧನೆ, ಹಿಂದೂ ಸಂಪ್ರದಾಯದ ಹಬ್ಬ. ಆ ಪರಂಪರೆಯಂತೆ ಈ ಬಾರಿಯೂ ದಸರಾ ನಡೆಯಬೇಕು. ಸುಮ್ಮನೆ ಬಾಯಿಗೆ ಬಂದಂತೆ ಹೇಳಿಕೆಗಳನ್ನು ಕೊಡುವುದು ಬಿಡಲಿ ಎಂದು ನಾರಾಯಣಗೌಡ ಎಚ್ಚರಿಕೆ ನೀಡಿದರು.