ಹಾಸನ: ಸಾಹಿತಿ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದಕ್ಕೆ ಅಭ್ಯಂತರವಿಲ್ಲ. ಆದರೆ, ಇಲ್ಲಿಯವರೆಗೂ ಯಾವ ಸಂಪ್ರದಾಯ ನಡೆದುಕೊಂಡು ಬಂದಿದೆಯೋ ಅದೇ ಸಂಪ್ರದಾಯದಂತೆ ದಸರಾ ಉದ್ಘಾಟನೆ ಆಗಬೇಕು ಎಂದು ಕರವೇ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ರಾಜಕೀಯ ಒತ್ತಡ, ಸ್ವಂತ ಆಲೋಚನೆಗಳ ಆಧಾರದ ಮೇಲೆ ದಸರಾ ಉದ್ಘಾಟನೆ ಮಾಡುವುದು ಸರಿಯಲ್ಲ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡದ ಭುವನೇಶ್ವರಿ ಬಗ್ಗೆ ಲಘುವಾಗಿ ಮಾತನಾಡುವುದು ಕನ್ನಡಿಗರಿಗೆ ಅವಮಾನ. ಭುವನೇಶ್ವರಿ ಕರ್ನಾಟಕದ ಎಲ್ಲಾ ಧರ್ಮೀಯರು ಆರಾಧಿಸುವ ದೇವಿ. ಅದು ಈಗ ಹುಟ್ಟಿದ ಪರಂಪರೆ ಅಲ್ಲ, ಬನವಾಸೆಯ ರಾಜಮನೆತನದಿಂದಲೂ ಆರಾಧನೆ ನಡೆದುಕೊಂಡು ಬಂದಿದೆ. ಇಂತಹ ಮಾತುಗಳು ನಾಳೆ ಚಾಮುಂಡೇಶ್ವರಿ ಕುರಿತು ಹೇಳಿಕೆಗೆ ದಾರಿ ಮಾಡಿಕೊಡುತ್ತವೆಯೇ ಎಂಬ ಪ್ರಶ್ನೆ ಎದ್ದಿದೆ ಎಂದು ನಾರಾಯಣಗೌಡ ಕಿಡಿಕಾರಿದರು.
ಭುವನೇಶ್ವರಿ, ಚಾಮುಂಡಿಯನ್ನು ಒಪ್ಪದೇ ಇದ್ದರೆ ಮೈಸೂರಿನ ಮಹಾರಾಜರ ದಸರಾವನ್ನು ಹೇಗೆ ಉದ್ಘಾಟಿಸುತ್ತೀರಿ. ನೀವು ದಸರಾ ಉದ್ಘಾಟನೆ ಮಾಡುವುದರಲ್ಲಿ ಭಿನ್ನಾಭಿಪ್ರಾಯವಿಲ್ಲ. ಆದರೆ ಕನ್ನಡಿಗರ ಭಾವನೆಗೆ ಧಕ್ಕೆ ತರುವ ಹೇಳಿಕೆಗಳನ್ನು ನಿಲ್ಲಿಸಬೇಕು. ಅಂತಹ ಹೇಳಿಕೆಗಳ ನಡುವೆಯೂ ಉದ್ಘಾಟನೆ ಮಾಡಿದರೆ ಅದು ತಪ್ಪಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *