ಸಕಲೇಶಪುರ: ನಾಯಕರ ಪರವಾಗಿ ಅಭಿಮಾನಿಗಳು ಬೇಡಿಕೆ ಇಟ್ಟು ಹೋರಾಟ ನಡೆಸುವುದು ಪ್ರಜಾಪ್ರಭುತ್ವದ ಸೌಂದರ್ಯ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದರು.

ಪಟ್ಟಣದ ಕ್ರಾಫರ್ಡ್ ಆಸ್ಪತ್ರೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಕೆಲ ಶಾಸಕರ ಅಭಿಮಾನಿಗಳು ಪ್ರತಿಭಟನೆ ನಡೆಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಸಚಿವ ಸ್ಥಾನಕ್ಕೆ ಸಂಬಂಧಿಸಿದಂತೆ ಯಾವುದೇ ಅಸಮಾಧಾನ ಇಲ್ಲ. ಅಭಿಮಾನಿಗಳು ತಮ್ಮ ನಾಯಕರಿಗೆ ಸಚಿವ ಸ್ಥಾನ ನೀಡುವಂತೆ ಬೇಡಿಕೆ ಇಡುವುದು ಸಹಜ. ಅದು ಪ್ರಜಾಪ್ರಭುತ್ವದ ಸೌಂದರ್ಯವೇ ಆಗಿದೆ. ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದನ್ನು ಪಕ್ಷದ ನಾಯಕರು ಹಾಗೂ ಪಕ್ಷವೇ ತೀರ್ಮಾನಿಸುತ್ತದೆ. ಈ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಜನರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಜನಪರ ಆಡಳಿತ ನೀಡಲು ಕಾಂಗ್ರೆಸ್ ಪಕ್ಷ ಸಂಪೂರ್ಣ ಬದ್ಧವಾಗಿದೆ ಎಂದು ಹೇಳಿದರು.

ಮುಂದಿನ ವಿಧಾನಸಭಾಧ್ಯಕ್ಷರು ಯಾರು ಎಂಬ ಪ್ರಶ್ನೆಗೆ ಉತ್ತರಿಸಿ, ಅದು ಸಂಪೂರ್ಣವಾಗಿ ಪಕ್ಷದ ತೀರ್ಮಾನದ ವಿಷಯವಾಗಿದೆ. ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದರಂತೆ ನಡೆದುಕೊಳ್ಳಲಾಗುತ್ತದೆ ಎಂದರು.
ಉತ್ತಮ ಸಭಾಧ್ಯಕ್ಷರು, ಸಮರ್ಥ ಸಚಿವರು ಹಾಗೂ ಜನಪರ ಸರ್ಕಾರವನ್ನು ನೀಡುವ ಗುರಿಯನ್ನು ನಾವು ಹೊಂದಿದ್ದೇವೆ. ಸರ್ಕಾರದ ಎಲ್ಲ ಸದಸ್ಯರು, ಶಾಸಕರು ಹಾಗೂ ಪ್ರತಿಪಕ್ಷದ ಸಹಕಾರದೊಂದಿಗೆ ಜನ ಮೆಚ್ಚುವ ಆಡಳಿತ ನೀಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *