ಹಾಸನ: ಶ್ರೀ ಕ್ಷೇತ್ರ ಧರ್ಮಸ್ಥಳದ ಪವಿತ್ರತೆ, ಗೌರವ ಮತ್ತು ನಂಬಿಕೆಗೆ ಧಕ್ಕೆ ತರುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅಪಪ್ರಚಾರ ನಡೆಸುತ್ತಿರುವವರ ವಿರುದ್ಧ ಸರ್ಕಾರ ಹಾಗೂ ತನಿಖಾ ಸಂಸ್ಥೆಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಸೇವಕ ಸೋಮು ಹಾಸನ ಆಗ್ರಹಿಸಿದ್ದಾರೆ.

ಒಬ್ಬ ಮಹಿಳೆಯ ಹೆಸರನ್ನು ಮುಂದಿಟ್ಟುಕೊಂಡು ಕೋಟ್ಯಂತರ ಭಕ್ತರ ನಂಬಿಕೆಯ ಕೇಂದ್ರವಾಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳವನ್ನು ಗುರಿಯಾಗಿಸಿಕೊಂಡು ನಿರಾಧಾರ ಆರೋಪಗಳನ್ನು ಹರಿಬಿಡುವುದು ಖಂಡನೀಯ. ಸತ್ಯಾಂಶಗಳಿಗಿಂತ ಸಂಚಲನ ಸೃಷ್ಟಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನಗಳ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆಹಚ್ಚಿ, ಸಮಾಜದಲ್ಲಿ ಅಶಾಂತಿ ಉಂಟುಮಾಡುವವರ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಹೇಳಿದರು.
ಧರ್ಮಸ್ಥಳವು ಕೇವಲ ಧಾರ್ಮಿಕ ಕ್ಷೇತ್ರವಲ್ಲ; ಸೇವೆ, ದಾನಧರ್ಮ ಮತ್ತು ಮಾನವೀಯ ಮೌಲ್ಯಗಳ ಪ್ರತೀಕವಾಗಿದೆ. ಇಂತಹ ಕ್ಷೇತ್ರದ ಘನತೆಗೆ ಕಳಂಕ ತರುವ ಉದ್ದೇಶದಿಂದ ಸುಳ್ಳು ಆರೋಪಗಳು, ಅಪಪ್ರಚಾರಗಳು ಹಾಗೂ ಜನರನ್ನು ದಿಕ್ಕುತಪ್ಪಿಸುವ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು. ತಪ್ಪಿತಸ್ಥರು ಯಾರೇ ಆಗಿದ್ದರೂ ಕಾನೂನಿನ ಅಡಿಯಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಿ, ಅಪರಾಧ ಸಾಬೀತಾದಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.
ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುವವರು, ಸಮಾಜದಲ್ಲಿ ದ್ವೇಷ ಮತ್ತು ಗೊಂದಲ ಸೃಷ್ಟಿಸುವವರ ವಿರುದ್ಧವೂ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *