ಹಾಸನ: ಬಗರ್ ಹುಕುಂ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಜಿಲ್ಲಾಧ್ಯಕ್ಷ ಹಾಗೂ ಬೇಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್. ಲಿಂಗೇಶ್ ಅವರನ್ನು ಸಿಒಡಿ (ಅಪರಾಧ ತನಿಖಾ ಇಲಾಖೆ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಇಂದು ಬೆಳಗ್ಗೆ ಬೇಲೂರಿನ ನಿವಾಸದಿಂದ ಲಿಂಗೇಶ್ ಅವರನ್ನು ಸಿಒಡಿ ಅಧಿಕಾರಿಗಳ ತಂಡ ಬೆಂಗಳೂರಿಗೆ ಕರೆದೊಯ್ದಿದೆ. 2023ರಲ್ಲಿ ಜೆಡಿಎಸ್ ಪಕ್ಷದ ಶಾಸಕರಾಗಿದ್ದ ಲಿಂಗೇಶ್ ಅವರು ಆಗ ತಾಲೂಕು ಬಗರ್ ಹುಕುಂ ಸಮಿತಿಯ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಲಿಂಗೇಶ್ ಅವರು ಶಾಸಕರಾಗಿದ್ದ ಐದು ವರ್ಷಗಳ ಅವಧಿಯಲ್ಲಿ ಬಗರ್ ಹುಕುಂ ಯೋಜನೆಯಲ್ಲಿ ಸುಮಾರು ₹750 ಕೋಟಿ ಮೊತ್ತದ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಕೋಲಾರ ಮೂಲದ ರಾಜಣ್ಣ ಎಂಬುವರು ಸಿಒಡಿಗೆ ದೂರು ನೀಡಿದ್ದರು. ಪ್ರಕರಣದಲ್ಲಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳದಂತೆ ಕೋರಿ ಲಿಂಗೇಶ್ ಅವರು ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದರು. ಆದರೆ ಜಾಮೀನು ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಸಿಒಡಿ ಅಧಿಕಾರಿಗಳು ಅವರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಲಿಂಗೇಶ್ ಅವರ ಜೊತೆಗೆ ಪ್ರಕರಣಕ್ಕೆ ಸಂಬಂಧಿಸಿದ ಕೆಲ ಮಾಜಿ ಅಧಿಕಾರಿಗಳನ್ನೂ ಸಿಒಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *