ಹಾಸನ: ಚಾಲಕನ ನಿಯಂತ್ರಣ ತಪ್ಪಿದ ಕ್ರೆಟಾ ಕಾರೊಂದು ರಾಷ್ಟ್ರೀಯ ಹೆದ್ದಾರಿ 75ರ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದು, ರೈತರ ಹೊಲಕ್ಕೆ ಹಾರಿ ಬಿದ್ದ ಘಟನೆ ಆಲೂರು ತಾಲ್ಲೂಕಿನ ತಿಮ್ಮನಹಳ್ಳಿ ಗ್ರಾಮದ ಬಳಿ ನಡೆದಿದೆ.
ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಅಪ್ರಾಪ್ತ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ಮಮಾಕ್ಷ, ಪ್ರಜ್ವಲ್, ಗುರುಪ್ರಸಾದ್ ಹಾಗೂ ಹೇಮಂತ್ ಗಾಯಾಳುಗಳು. ಇವರ ಪೈಕಿ ಮಮಾಕ್ಷ ಎಂಬ ವಿದ್ಯಾರ್ಥಿಯ ಸ್ಥಿತಿ ಗಂಭೀರವಾಗಿದೆ.
ಸಕಲೇಶಪುರ ಕಡೆಯಿಂದ ಹಾಸನದತ್ತ ಬರುತ್ತಿದ್ದ KA-13-P-4925 ನೋಂದಣಿ ಸಂಖ್ಯೆಯ ಕ್ರೆಟಾ ಕಾರು, ಅತಿವೇಗದ ಕಾರಣ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಕಾರು ಹೆದ್ದಾರಿಯಿಂದ ಸುಮಾರು 100ರಿಂದ 150 ಮೀಟರ್ ದೂರದಲ್ಲಿರುವ ರೈತರ ಹೊಲಕ್ಕೆ ಹಾರಿ, ಅಲ್ಲಿದ್ದ 11 ಕೆವಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮ ಹೊಲದಲ್ಲಿದ್ದ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಅಪಘಾತದ ವೇಳೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಅತಿವೇಗವೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಆಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
