ಹಳೇಬೀಡು: ಹೈನುಗಾರಿಕೆ, ಕೃಷಿ ಪರಿಕರ ಖರೀದಿ, ರಸಗೊಬ್ಬರ ಮಾರಾಟಕ್ಕೆ ಪರವಾನಗಿ ಸೇರಿ ಕೃಷಿ ಸಂಬಂಧಿತ ಕೆಲಸ ಮಾಡಿಕೊಡುವುದಾಗಿ ನಕಲಿ ಗುರುತಿನ ಚೀಟಿಯೊಂದಿಗೆ ಬೇಲೂರು ತಾಲ್ಲೂಕಿನ ರೈತರಿಗೆ ಸುಮಾರು 1.5 ಕೋ.ರೂ. ಪಂಗನಾಮ ಹಾಕಿರುವ ಆಸಾಮಿಯನ್ನು ರೈತರೇ ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೋಲಾರ ಜಿಲ್ಲೆ ಬೈರಕೂರು ಹೋಬಳಿ ಕಾಡೇನಹಳ್ಳಿಯ ಜಿ.ಶಂಕರಪ್ಪ ಮೋಸದಾಟದ ಸೂತ್ರಧಾರ. ಅನ್ನದಾತರ ಹಣ ವಸೂಲಿ ಮಾಡಲು ಈತ ಹೂಡಿದ್ದ ಆಟಗಳು ಬೆಚ್ಚಿ ಬೀಳಿಸುವಂತಿವೆ. ಮೋಸದಾಟದ ಪಟ್ಟಿಯಲ್ಲಿ ಅನಕ್ಷರಸ್ಥ ರೈತರು ಮಾತ್ರವಲ್ಲದೆ ಜನಪ್ರತಿನಿಧಿಗಳ ಆಪ್ತ ಸಹಾಯಕರು ಇದ್ದಾರೆ.
ಮೋಸದ ಜಾಲಕ್ಕೆ ಮರುಳಾದ ಜನರು:
ಹಳೇಬೀಡು ಹೋಬಳಿಯ ರೈತರು ಹಾಗು ಉದ್ದಿಮೆ ಮಾಡಲು ಬಯಸಿದ ಆರ್ಥಿಕ ಸಬಲರೇ ಆತನ ಗುರಿಯಾಗಿದ್ದರು. ಶಂಕರಪ್ಪ ತನ್ನನ್ನು ಪಿಎಂಇಜಿಪಿ (ಪ್ರಧಾನಮಂತ್ರಿ ಯೋಜಗಾರ ಯೋಜನೆ) ಏಜೆಂಟ್ ಎಂದು ಪರಿಚಯ ಮಾಡಿಕೊಂಡಿದ್ದ. ಕೇಂದ್ರ ಸರ್ಕಾರದ ಅಧೀನದ ಎಫ್‌ಐಎ ಕಂಪನಿಯ ಉದ್ಯೋಗಿ ಎಂದು ನಂಬಿಸಿ ನಕಲಿ ಗುರುತಿನ ಚೀಟಿ ತೋರಿಸಿ ಎಲ್ಲರಿಗೂ ಮಕಲ್ ಟೋಪಿ ಹಾಕಿದ್ದ ಎಂದು ತಿಳಿದುಬಂದಿದೆ.
ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ 40 ರಿಂದ 50 ಲ.ರೂ. ವರೆಗೆ ಹೈನುಗಾರಿಕೆ ಸಾಲ, ರಸಗೊಬ್ಬರ ಮಾರಾಟ ಮಳಿಗೆ ಪ್ರಾರಂಭಿಸಲು ಸಹಾಯಧನದ ಜೊತೆಗೆ ಪರವಾನಗಿ, ರಿಯಾಯಿತಿ ದರದಲ್ಲಿ ಕ್ರಿಮಿನಾಶಕ ಔಷಧಿ ಡೀಲರ್‌ಶಿಪ್ ಕೊಡಿಸುವುದಾಗಿ ಬಣ್ಣದ ಮಾತುಗಳಿಂದ ತನ್ನ ಮೋಸದ ಬಲೆಗೆ ಬೀಳಿಸಿಕೊಂಡಿದ್ದ. ಆತನ ದುರುದ್ದೇಶವನ್ನು ಅರಿಯುವಲ್ಲಿ ವಿಫಲರಾದ ರೈತರು ಲಕ್ಷಾಂತರ ರೂಪಾಯಿ ನೀಡಿದ್ದಾರೆ. ಆದರೆ ಎರಡು ವರ್ಷ ಕಳೆದರೂ ಹಾಕಿದ ಬಂಡವಾಳಕ್ಕೆ ಪ್ರತಿಫಲ ದೊರೆಯದೆ ಇದ್ದಾಗ ತಾವು ಗಂಡಾಂತರಕ್ಕೆ ಸಿಲುಕಿದ್ದೇವೆಂದು ದಿಗ್ಭ್ರಾಂತರಾಗಿದ್ದರು.
ಬೈಕ್ ಮೆಕ್ಯಾನಿಕ್ ಶಂಕರಪ್ಪ:
ಶಂಕರಪ್ಪ ಬೈಕ್ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿದ್ದ. 2 ವರ್ಷಗಳ ಹಿಂದೆ ಹಳೇಬೀಡಿನ ವಿವಿಧೆಡೆ ಜನರನ್ನು ಪರಿಚಯ ಮಾಡಿಕೊಂಡು ಸುಂದರ ಸುಳ್ಳು ಕಥೆ ಹೆಣೆದು ಎಲ್ಲರನ್ನೂ ನಂಬಿಸಿದ್ದ. ಸ್ಥಳೀಯರ ವಿಶ್ವಾಸ ಗಳಿಸಿದ ಆತ ವಾರಕ್ಕೊಮೆ ಹಳ್ಳಿಗಳಿಗೆ ಭೇಟಿ ನೀಡುತ್ತಿದ್ದ. ಆರಂಭದಲ್ಲಿ ಕೆಲವರಿಗೆ ಚಿಕ್ಕದಾಗಿ ಆರ್ಥಿಕ ಸಹಾಯವನ್ನೂ ಮಾಡಿದ್ದ. ಆತನ ಮೋಸದಾಟಕ್ಕೆ ಬಲಿಯಾದ ಹೋಬಳಿಯ ಸುಮಾರು 150 ರೈತರು ಹಣ ಹೂಡಿಕೆ ಮಾಡಿದ್ದಾರೆ.
ಶಂಕರಪ್ಪನ ಕಳ್ಳಾಟದ ಕುರಿತು ರೈತರು ಹೇಳಿಕೊಂಡಿದ್ದು, ಈ ವ್ಯಕ್ತಿ ನಮಗೆ ಎಂದೂ ಪರಿಚಯ ಇರಲಿಲ್ಲ. ದ್ಯಾಪನಹಳ್ಳಿ ಸೋಮಣ್ಣ ಮುಖಾಂತರ ಪರಿಚಯವಾಗಿದ್ದ. ಒಬ್ಬೊಬ್ಬರಿಗೆ ಕನಿಷ್ಟ 2 ರಿಂದ 5 ಲ.ರೂ. ಪಂಗನಾಮ ಇಟ್ಟಿದ್ದಾನೆ. ಆತನಿಗೆ ಹಣ ಹೊಂದಿಸಲು ಆಭರಣ, ಜಮೀನು ಅಡ ಇಟ್ಟಿದ್ದೇವೆ. ಸಾಲ ತೀರಿಸಲಾಗದೆ ಅನೇಕರು ಊರು ತೊರೆದಿದ್ದಾರೆಂದರು.
ಮತ್ತೊಬ್ಬ ರೈತ ನಂದಕುಮಾರ್ ಅವರು ಮಾತನಾಡಿ, ಲಾಭದಾಸೆಯಿಂದ ನಮ ತಂದೆ ಈತನಿಗೆ 15 ಲ.ರೂ. ನೀಡಿದ್ದರು. ಬಳಿಕ ಮೋಸ ಹೋಗಿದ್ದೇನೆಂದು ಗೊತ್ತಾಗಿ ಅದೇ ಕೊರಗಿನಲ್ಲೇ ಪ್ರಾಣ ಬಿಟ್ಟರು ಎಂದು ಅಳಲು ತೋಡಿಕೊಂಡರು.
