ಅರಕಲಗೂಡು: ತಾಲ್ಲೂಕಿನ ಮುತ್ತುಗದ ಹೊಸೂರು ಗ್ರಾಮದಲ್ಲಿ ಸುಮಾರು ಆರು ವರ್ಷಗಳಿಂದ ಬೆಳೆದಿದ್ದ ಬೀದಿನಾಯಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ಅದಕ್ಕೆ ನ್ಯಾಯ ಕೊಡಿಸಲು ಗ್ರಾಮದ ವಕೀಲರೊಬ್ಬರು ಪೊಲೀಸ್ ಮೆಟ್ಟಿಲೇರಿದ ಅಪರೂಪದ ಘಟನೆ ನಡೆದಿದೆ.
ಗ್ರಾಮದ ವಕೀಲ ಶಿವಕುಮಾರ್ ಎಂ.ಕೆ. ಅವರ ಮನೆಯ ಬಳಿಯೇ ಇರುತ್ತಿದ್ದ ಈ ಶ್ವಾನವು ಆಗಸ್ಟ್ 10 ರಂದು ಸಂಜೆ 4:30 ರ ಸುಮಾರಿಗೆ ರಾಮೇಗೌಡ ಎಂಬುವವರ ಮನೆಯ ಮುಂದೆ ದಿಢೀರ್ ಮೃತಪಟ್ಟಿತ್ತು. ಸದಾ ಆರೋಗ್ಯವಾಗಿದ್ದ ನಾಯಿಯ ಸಾವು ತೀವ್ರ ಅನುಮಾನಕ್ಕೆ ಕಾರಣವಾದ ಹಿನ್ನೆಲೆಯಲ್ಲಿ, ಯಾರೋ ವಿಷವಿಕ್ಕಿ ಕೊಂದಿರಬಹುದು ಎಂದು ಶಂಕಿಸಿದ ಶಿವಕುಮಾರ್ ತಕ್ಷಣವೇ ‘112’ ತುರ್ತು ಸಹಾಯವಾಣಿಗೆ ಕರೆ ಮಾಡಿದ್ದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೊಣನೂರು ಠಾಣೆ ಪೊಲೀಸರು, ನಾಯಿಯ ಮರಣೋತ್ತರ ಪರೀಕ್ಷೆ (Post-Mortem) ನಡೆಸಲು ಆಗಸ್ಟ್ 11 ರಂದು ಬೆಳವಾಡಿ ಗ್ರಾಮದ ಪಶು ವೈದ್ಯಾಧಿಕಾರಿಗೆ ಪತ್ರ ಬರೆದಿದ್ದರು. ಅದರಂತೆ ಪಶು ವೈದ್ಯಾಧಿಕಾರಿ ಡಾ. ಸಂಜೀವ್ ಅವರು ಶ್ವಾನದ ಮೃತದೇಹದ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿದ್ದಾರೆ.
ಸಾವು ನಿಜಕ್ಕೂ ಹೇಗೆ ಸಂಭವಿಸಿತು ಎಂಬುದನ್ನು ನಿಖರವಾಗಿ ತಿಳಿಯಲು ಮೃತ ಶ್ವಾನದ 9 ಮಾದರಿಗಳನ್ನು (Samples) ಮೈಸೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿಕೊಡಲಾಗಿದೆ. ಬೀದಿನಾಯಿಯೊಂದರ ಸಾವಿನ ರಹಸ್ಯ ಭೇದಿಸಲು ವಕೀಲರು ತೋರಿಸಿರುವ ಈ ಜಾಗೃತಿ ಹಾಗೂ ಪ್ರಾಣಿದಯೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.
