ಹಾಸನ: ರಾಜ್ಯ ಸರ್ಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಮೂರುವರೆ ತಿಂಗಳು ಸಮಯ ತೆಗೆದುಕೊಂಡಿದೆ. ಆದರೂ ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಕೈ ಬಿಡಲಾಗಿದೆ ಎಂದು ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಟೀಕಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 101ರಲ್ಲಿ 89 ತಾಲೂಕು ತೀವ್ರ, 12 ಭಾಗಶಃ ಬರ ಎಂದು ಘೋಷಿಸಲಾಗಿದೆ. ಮೇ ತಿಂಗಳಲ್ಲಿ ಮುಂಗಾರು ಆರಂಭವಾಗಬೇಕಿತ್ತು. ಜೂನ್ 15ರಲ್ಲಿ ಸ್ವಲ್ಪ ಬಿತ್ತನೆಯಾಗಿದ್ದರೂ ಅದು ಸರಿಯಾಗಿ ಆಗಿಲ್ಲ ಎಂದರು.
ಜಿಲ್ಲೆಯ 8 ತಾಲೂಕುಗಳ ಪೈಕಿ 5 ತಾಲೂಕು ಮಾತ್ರ ಬರಪೀಡಿತ ಎಂದು ಘೋಷಿಸಿದ್ದಾರೆ. ಆಲೂರಿನ ಕೆಂಚಮ್ಮನಹೊಸಕೋಟೆ ಬಿಟ್ಟರೆ ಉಳಿದ ಹೋಬಳಿಗಳಲ್ಲಿ ತೀವ್ರ ಬರವಿದೆ. ಆಲೂರು, ಬೇಲೂರನ್ನು ಯಾವ ಆಧಾರದಲ್ಲಿ ಬಿಟ್ಟಿದ್ದಾರೆ? ಸರ್ಕಾರದ ಲೆಕ್ಕಾಚಾರ ಸಂಪೂರ್ಣ ತಪ್ಪಾಗಿದೆ. ವಾಟೆಹೊಳೆ ಜಲಾಶಯ ಭರ್ತಿಯಾಗಿದ್ದರೂ ನೀರು ಬಿಡುತ್ತಿಲ್ಲ. ಜಿಲ್ಲೆಯಲ್ಲಿ ಶೇ.62ರಷ್ಟು ಮಳೆ ಕೊರತೆ ಇದೆ. ಅಧಿಕಾರಿಗಳು ಮಾಹಿತಿ ನೀಡಿಲ್ಲವೇ? ಆಲೂರು, ಬೇಲೂರು ಸೇರಿಸಬೇಕು ಎಂದು ಮುಖ್ಯಮಂತ್ರಿಗೆ ಆಗ್ರಹಿಸಿದರು.

