ಅರಕಲಗೂಡು: ಜಮೀನು ವ್ಯಾಜ್ಯ ಸಂಬಂಧ ದೂರು ಸಲ್ಲಿಸಲು ಹಾಸನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರ ಅಧ್ಯಕ್ಷತೆಯ ಜನ ಸಂಪರ್ಕ ಸಭೆಗೆ ಬರುತ್ತಿದ್ದ ಕುಟುಂಬದ ಐವರ ಮೇಲೆ ಸಂಬಂಧಿಕರೇ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿರುವ ಘಟನೆ ತಾಲ್ಲೂಕಿನ ವಡ್ಡರಹಳ್ಳಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದ ನಿಂಗರಾಜಮ ಪುತ್ರರಾದ ವಿಠ್ಠಲ್‌ ಹಾಗು ರಾಜಶೇಖರ್‌ ಗಾಯಾಳುಗಳು. ನಿಂಗರಾಜಮನ ಅಣ್ಣ ಹಾಲಪ್ಪ, ಅವರ ಮಕ್ಕಳಾದ ರಾಜಪ್ಪ, ರತನ್‌ ಹಾಗು ಇತರರು ಹಲ್ಲೆ ನಡೆಸಿದ್ದಾರೆನ್ನಲಾಗಿದೆ. ಘಟನೆಯಲ್ಲಿ ವಿಠಲ್‌ಗೆ ಸೇರಿದ ಕಾರು ಸಂಪೂರ್ಣ ಜಖಂಗೊಂಡಿದೆ.
ಘಟನೆ ವಿವರ:
ನಿಂಗರಾಜಮ ಹೆಸರಿನಲ್ಲಿ 3ಎಕರೆ 19 ಗುಂಟೆ ಜಾಗವಿದ್ದು, ಅವರು ಬದುಕಿದ್ದಾಗಲೇ ನಕಲಿ ಮರಣ ಪ್ರಮಾಣ ಪತ್ರ ಪಡೆದು ಅಣ್ಣ ಹಾಲಪ್ಪ ಹಾಗು ಮಕ್ಕಳು ತಮ ಹೆಸರಿಗೆ ಖಾತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ನಿಂಗರಾಜಮ ಅವರ ಪುತ್ರ ವಿಠ್ಠಲ್‌ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು. ಜಮೀನು ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ವೈಮನಸ್ಸು ಇತ್ತು.
ಜಿಲ್ಲಾ ಉಸ್ತುವಾರಿ ಸಚಿವರ ಜನ ಸಂಪರ್ಕ ಸಭೆಯಲ್ಲಿ ದೂರು ಸಲ್ಲಿಸಿದರೆ ನ್ಯಾಯ ಸಿಗಬಹುದೆಂದು ವಿಠ್ಠಲ್‌ ತಮ ಕಾರಿನಲ್ಲಿ ನಿಂಗರಾಜಮ ಹಾಗು ರಾಜಶೇಖರ್‌ ಅವರೊಂದಿಗೆ ಹಾಸನಕ್ಕೆ ಬರುತ್ತಿದ್ದರು. ಆಗ ಅಡ್ಡಗಟ್ಟಿದ ಹಾಲಪ್ಪ ಮತ್ತಿತರರು ಡ್ರ್ಯಾಗನ್‌, ಲಾಂಗ್‌, ದೊಣ್ಣೆಗಳಿಂದ ಮನಬಂದಂತೆ ಥಳಿಸಿದ್ದಾರೆ. ಸ್ಥಳೀಯರು ಹೊಡೆದಾಟದ ವಿಡಿಯೋ ಅನ್ನು ಮೊಬೈಲ್‌ ಕ್ಯಾಮರಾಗಳಲ್ಲಿ ಸೆರೆ ಹಿಡಿದಿದ್ದಾರೆ. ಗಾಯಾಳುಗಳನ್ನು ಕೊಣನೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *