ಹಾಸನ: ಧರ್ಮಸ್ಥಳ ಪ್ರಕರಣ ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು ಸದ್ಯ ಯೂಟ್ಯೂಬರ್ ಗಳಿಗೆ ಹಣ ಫಂಡಿಂಗ್
ಆಗಿದೆ ಎಂಬ ಚರ್ಚೆ ಜೋರಾಗಿದೆ.
ಮಂಡ್ಯದ ಚಂದನ್ ಗೌಡ ಹಾಗೂ ಸುಮಂತ್ ನಡುವೆ ನಡೆಯುತ್ತಿರುವ ವಾಕ್ಸಮರದಲ್ಲಿ ಚನ್ನರಾಯಪಟ್ಟಣದ ಅಭಿಷೇಕ್ ಎಂಬಾತನ ಹೆಸರು ತಳಕು ಹಾಕಿಕೊಂಡಿದೆ.
ಯೂಟ್ಯೂಬರ್ ಅಭಿಷೇಕ್ ನನ್ನು ಎಸ್ ಐಟಿ ಅಧಿಕಾರಿಗಳು ವಿಚಾರಣೆಗಾಗಿ ಮೂರು ದಿನಗಳ ಹಿಂದೆ ಚನ್ನರಾಯಪಟ್ಟಣಕ್ಕೆ ಬಂದು ಟೀ ಅಂಗಡಿಯಿಂದ ಕರೆದುಕೊಂಡು ಹೋಗಿದ್ದಾರೆ. ಧರ್ಮಸ್ಥಳ ವಿರುದ್ಧ ಷಡ್ಯಂತ್ರ ರೂಪಿಸಿದ ತಂಡದಲ್ಲಿ ಅಭಿಷೇಕ್ ಹೆಸರು ಮುಖ್ಯವಾಗಿ ಕೇಳಿಬಂದಿದೆ.
ತಾಯಿ ಹೇಮಲತಾ ಮಾತನಾಡಿ, ನನ್ನ ಮಗ ಸೌಮ್ಯ ಸ್ವಭಾವದವನು. ಇಂಜಿನಿಯರಿಂಗ್ ಓದಿ ನಂತರ ಯೂಟ್ಯೂಬರ್ ಆಗಿ ಸಮಾಜಮುಖಿ ವಿಡಿಯೋಗಳನ್ನು ಮಾಡುತ್ತಿದ್ದ. ಚಂದನ್‌ಗೌಡ ಪರಿಚಯವಿತ್ತು, ಸುಮಂತ್‌ರನ್ನು ಒಂದೆರಡು ಬಾರಿ ಮಾತ್ರ ಭೇಟಿಯಾಗಿದ್ದ. ಸಮೀರ್, ತಿಮ್ಮರೋಡಿ, ಗಿರೀಶ್ ಮಟ್ಟಣ್ಣನವರ್ ಪರಿಚಯವೇ ಇರಲಿಲ್ಲ. ಧರ್ಮಸ್ಥಳಕ್ಕೆ ಹೋದಾಗ ಅಲ್ಲಿ ಪರಿಚಯವಾಗಿರಬಹುದು. ನನ್ನ ಮಗ ತಪ್ಪೇನೂ ಮಾಡಿಲ್ಲ, ಅವನ ಮೇಲೆ ಸುಳ್ಳು ಆರೋಪ ಮಾಡಲಾಗುತ್ತಿದೆ. ಎಸ್‌ಐಟಿ ತನಿಖೆಯಲ್ಲಿ ಸತ್ಯ ಹೊರಬರಲಿದೆ, ಅವನು ದೋಷಮುಕ್ತನಾಗಿ ಬರುವುದು ಖಚಿತ ಎಂದರು.
ತಂದೆ ಮುದ್ದುಗೋಪಾಲ ಮಾತನಾಡಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ಓದಿ, ಮೊದಲು ಚಂದನ್‌ಗೌಡ ಎಲೆಕ್ಷನ್‌ಗಾಗಿ ವೀಡಿಯೋ ಎಡಿಟಿಂಗ್ ಮಾಡಿ ಬಳಿಕ ಯೂಟ್ಯೂಬರ್ ಆದ. ನನ್ನ ಹೆಂಡತಿಯ ಹೆಸರಿನಲ್ಲಿ ಇಎಂಐನಲ್ಲಿ ಕ್ಯಾಮೆರಾ ಕೊಡಿಸಿದ್ದೆ. ಸೌಜನ್ಯ ಪ್ರಕರಣ ವಿಚಾರದಲ್ಲಿ ಧರ್ಮಸ್ಥಳಕ್ಕೆ ಹೋದಾಗ ತಿಮ್ಮರೋಡಿ ಹಾಗೂ ಮಟ್ಟಣ್ಣನವರ್ ಪರಿಚಯವಾಗಿತ್ತು. ಅಲ್ಲಿಯೇ ತಿಮ್ಮರೋಡಿ ಸಂಬಂಧಿಕರ ಮನೆಯಲ್ಲಿ ತಂಗಿದ್ದ. ಅವನಿಗೆ ಯಾರೂ ಹಣದ ಆಮಿಷ ಕೊಡಲಿಲ್ಲ. ಸುಮಂತ್ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನನ್ನ ಮಗ ಧರ್ಮಸ್ಥಳದಲ್ಲಿ ಹಲ್ಲೆಗೆ ಒಳಗಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಯಾವುದೇ ತಪ್ಪಿಲ್ಲ, ತನಿಖೆ ಸತ್ಯಾಸತ್ಯತೆ ಹೊರತರುವುದು ಖಚಿತ ಎಂದರು.