ಅರಸೀಕೆರೆ: ಮಹಿಳೆಯೊಂದಿಗೆ ಹಣಕಾಸಿನ ವಹಿವಾಟಿನಿಂದಾಗಿ ಮನೆಗೆ ಬರುತ್ತಿದ್ದ ಸಂಬಂಧಿಕನೇ ಆಕೆಯನ್ನು ಕೊಂದು ನಾಲ್ಕು ದಿನಗಳ ಬಳಿಕ ತಾನೂ ಆತಹತ್ಯೆಗೆ ಶರಣಾಗಿರುವ ಘಟನೆ ತಾಲ್ಲೂಕಿನ ಎಸ್. ಡಿಗ್ಗೇನಹಳ್ಳಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಮದ ಪಾಲಾಕ್ಷ ಎಂಬುವರ ಪತ್ನಿ ಶಕುಂತಲ (48) ಕೊಲೆಯಾದ ಮಹಿಳೆ. ಆಕೆಯ ಸಂಬಂಧಿಯೇ ಆಗಿದ್ದ ಶಿವಮೂರ್ತಿ (55) ನೇಣಿಗೆ ಶರಣಾಗಿದ್ದಾನೆ. ಮಹಿಳೆ ಕೊರಳಿಂದ ಚಿನ್ನದ ಸರ ಕಿತ್ತುಕೊಂಡು ಹೋಗಿದ್ದ ಆತ ಪೊಲೀಸರಿಗೆ ಸಿಕ್ಕಿಬೀಳುತ್ತೇನೆಂಬ ಭಯದಿಂದ ಆತಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಕೃಷಿಕರಾಗಿರುವ ಪಾಲಾಕ್ಷ ಆ. 20 ರಂದು ಜಮೀನು ಕೆಲಸ ಮುಗಿಸಿ ಮಧ್ಯಾಹ್ನ ಮನೆಗೆ ಬಂದಾಗ ಅಡುಗೆ ಕೋಣೆಯಲ್ಲಿ ಶಕುಂತಲ ಮಲಗಿದ ಸ್ಥಿತಿಯಲ್ಲಿ ಬಿದ್ದಿದ್ದರು. ಉಸಿರುಗಟ್ಟಿಸಿ ಕೊಲೆ ಮಾಡಿರುವ ಹಾಗು ಕೊರಳಲ್ಲಿ ಚಿನ್ನದ ಸರ ಇಲ್ಲದೆ ಇರುವುದು ಗೊತ್ತಾಗಿದೆ. ಈ ಸಂಬಂಧ ಪಾಲಾಕ್ಷ ಅವರು ಕೊಲೆ ಪ್ರಕರಣ ದಾಖಲಿಸಿದ್ದರು. ಪತ್ನಿ ಶಕುಂತಲಳ ಸಂಬಂಧಿಯೇ ಆಗಿದ್ದ ಶಿವಮೂರ್ತಿ ಆಗಾಗ ಮನೆಗೆ ಬರುತ್ತಿದ್ದ. ಅತಿಯಾದ ಸಾಲ ಮಾಡಿಕೊಂಡಿದ್ದ. ನನ್ನ ಹೆಂಡತಿ ಬಳಿ ಸಾಲ ಕೇಳುತ್ತಿದ್ದನೆಂದು ಪಾಲಾಕ್ಷ ಆರೋಪಿಸಿದ್ದರು.
ಪ್ರಕರಣ ದಾಖಲಿಸಿಕೊಂಡಿದ್ದ ಜಾವಗಲ್ ಠಾಣೆ ಪೊಲೀಸರು ಶಿವಮೂರ್ತಿ ಪತ್ತೆಗೆ ಬಲೆ ಬೀಸಿದ್ದರು. ಪೊಲೀಸರು ತನ್ನ ಬೆನ್ನು ಬಿದ್ದಿದ್ದಾರೆಂಬ ವಿಚಾರ ಗೊತ್ತಾಗುತ್ತಿದ್ದಂತೆ ಶಿವಮೂರ್ತಿ ಹೆದರಿ ಆ. 24 ರಂದು ಮನೆಗೆ ಹೊಂದಿಕೊಂಡಿರುವ ಕೊಟ್ಟಿಗೆಯಲ್ಲಿ ನೇಣು ಹಾಕಿಕೊಂಡಿದ್ದಾನೆ.
ಕತ್ತು ಹಿಸುಕಿ ಶಕುಂತಲ ಕೊಲೆ:
ಆ. 20ರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಮನೆಗೆ ಬಂದಿದ್ದ ಶಿವಮೂರ್ತಿ ಚಿನ್ನದ ಸರ ಕೊಡುವಂತೆ ಶಕುಂತಲ ಅವರೊಂದಿಗೆ ಜಗಳ ಮಾಡಿದ್ದಾನೆ. ಸರ ಕೊಡಲು ಮಹಿಳೆ ಒಪ್ಪದೇ ಇದ್ದಾಗ ಉಸಿರುಗಟ್ಟಿಸಿ ಸಾಯಿಸಿ, ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದನೆಂದು ತಿಳಿದುಬಂದಿದೆ. ಜಾವಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
