ಅರಕಲಗೂಡು: ಸಾರ್ವಜನಿಕ ಆಸ್ಪತ್ರೆಯ ಮೂಳೆ ತಜ್ಞ ಡಾ॥ ಎಂ.ಕೆ. ಹರೀಶ್ ಅವರಿಗೆ ಖಾಸಗಿ ಆಸ್ಪತ್ರೆ ವೈದ್ಯರು ನೀಡಿರುವ ವೈದ್ಯಕೀಯ ಪ್ರಮಾಣ ಪತ್ರ ಆಧರಿಸಿ ದೀರ್ಘ ರಜೆ ನೀಡಿರುವ ಕುರಿತು ತನಿಖೆ ನಡೆಸಬೇಕೆಂದು ಶಾಸಕ ಎ. ಮಂಜು ಅವರು ಸೂಚಿಸಿದರು.
ಆಸ್ಪತ್ರೆ ಸಭಾಂಗಣದಲ್ಲಿ ನಡೆದ ರಕ್ಷಾ ಸಮಿತಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ರಜೆ ನೀಡಿರುವ ಆಡಳಿತ ವೈದ್ಯಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿ ಕ್ರಮದ ಕುರಿತು ತನಿಖೆ ನಡೆಸಿ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಬೇಕೆಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಎಂ.ಬಾಬುಗೆ ನಿರ್ದೇಶನ ನೀಡಿದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ಡಾ॥ ಹರೀಶ್ ಅಂದಾಜು ಒಂದು ತಿಂಗಳು ಸೇವೆ ಹೊರತುಪಡಿಸಿದರೇ ಉಳಿದಂತೆ ಸಂಪೂರ್ಣವಾಗಿ ರಜೆಯಲ್ಲಿದ್ದಾರೆ. ಪ್ರತಿ ತಿಂಗಳು ಸಂಬಳ ಮಾತ್ರ ಪಡೆಯುತ್ತಾರೆ. ಸರ್ಕಾರಿ ನೌಕರ, ಅಧಿಕಾರಿಗೆ ಸೇವಾ ನಿಮಯ ಪ್ರಕಾರ ಇಂತಿಷ್ಟು ಅವಧಿಯ ರಜೆ ಪಡೆಯಲು ಅವಕಾಶವಿದೆ. ಹೆಚ್ಚುವರಿಯಾಗಿ ರಜೆ ಪಡೆಯಬೇಕಾದರೇ ಇಲಾಖೆಯ ಅನುಮತಿ ಬೇಕು. ಅಲ್ಲದೆ ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರಿಂದ ವೈದ್ಯಕೀಯ ಪ್ರಮಾಣ ಪತ್ರ ಪಡೆಯುವುದು ಕಡ್ಡಾಯ. ಆದರೆ ಈತ ಖಾಸಗಿ ಆಸ್ಪತ್ರೆ ವರದಿ ಪಡೆದು ರಜೆ ಮಂಜೂರು ಮಾಡಿಕೊಂಡಿರುವುದು ಹೇಗೆ ಎಂದು ಗರಂ ಆದರು.
ದೀರ್ಘ ರಜೆಯಲ್ಲಿರುವ ಕಾರಣ ಜನ ಸಾಮಾನ್ಯರಿಗೆ ತುಂಬಾ ಸಮಸ್ಯೆಯಾಗಿದೆ. ಕೂಡಲೇ ಈತನನ್ನು ಬೇರೆ ಆಸ್ಪತ್ರೆಗೆ ವರ್ಗಾವಣೆ ಮಾಡಬೇಕು. ಇಲ್ಲಿನ ಆಸ್ಪತ್ರೆಗೆ ಬೇರೆ ವೈದ್ಯರನ್ನು ನೇಮಕ ಮಾಡಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸೂಚನೆ ನೀಡಿದರು.
ಸರ್ಕಾರಿ ಆಸ್ಪತ್ರೆಯಿಂದ 200 ಮೀಟರ್ ದೂರದಲ್ಲಿ ಖಾಸಗಿ ಕ್ಲಿನಿಕ್, ಆಸ್ಪತ್ರೆ ತೆರೆಯಲು ಅವಕಾಶವಿದೆ. ಅದನ್ನು ಉಲ್ಲಂಘನೆ ಮಾಡಿ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಖಾಸಗಿ ಕ್ಲಿನಿಕ್, ಲ್ಯಾಬೋರೇಟರಿ ಕಾರ್ಯರ್ನಿಹಿಸುತ್ತಿವೆ. ಈ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ॥ ಪುಷ್ಪಲತಾ ಅವರಿಗೆ ತಿಳಿಸಿದರು.
