ಚನ್ನರಾಯಪಟ್ಟಣ: ಧರ್ಮಸ್ಥಳ ವಿರುದ್ಧ ವಿಡಿಯೋ ಮಾಡಲು ಯೂಟ್ಯೂಬರ್ ಅಭಿಷೇಕ್ ದುಡ್ಡು ಪಡೆದಿದ್ದಾನೆಂಬ ಹೇಳಿಕೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು ಪ್ರಕರಣ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಮಂಡ್ಯ ಮೂಲದ ಸುಮಂತ್ ವಿರುದ್ಧ ಅಭಿಷೇಕ್ ಚನ್ನರಾಯಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸುಮಂತ್ ನನ್ನ ವಿರುದ್ಧ ನಾಲ್ಕು ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ನಾನು ಧರ್ಮಸ್ಥಳದ ವಿರುದ್ಧ ವೀಡಿಯೋ ಮಾಡಲು ಹಣ ಪಡೆದುಕೊಂಡಿದ್ದೇನೆ, ಆಡಿಯೋ ಮಾಡಲು ಒತ್ತಾಯಿಸಿದ್ದೇನೆ, ಚಂದನ್‌ಗೌಡ ಮೂಲಕ ವೀಡಿಯೋ ಮಾಡಿಸಲು ಯತ್ನಿಸಲಾಗಿದೆ ಎಂಬ ಆರೋಪಗಳು ನಿರಾಧಾರ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಮಾತನಾಡಿದ ಅಭಿಷೇಕ್, ಸುಮಂತ್ ಮಾಡಿರುವ ಎಲ್ಲ ಆರೋಪಗಳು ಸುಳ್ಳು. ನಾನು ಮಾನನಷ್ಟ ಮೊಕದ್ದಮೆ ಹಾಕಲು ಬಂದಿದ್ದೆ, ಆದರೆ ಪೊಲೀಸರು ಕೋರ್ಟ್‌ಗೆ ಹೋಗಿ ಎಂದಿದ್ದಾರೆ. ನಾನು ಯಾರಿಂದಲೂ ಹಣ ಪಡೆದಿಲ್ಲ. ಕಳೆದ ಮಾರ್ಚ್ ತಿಂಗಳಿನಿಂದ ಧರ್ಮಸ್ಥಳದಲ್ಲಿ ನಡೆದ ಘಟನೆಗಳ ಬಗ್ಗೆ ಮಾತ್ರ ವೀಡಿಯೋ ಮಾಡಿ ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ್ದೆ. ಎಸ್‌ಐಟಿ ತನಿಖೆಯಲ್ಲೂ ನಾನು ಹಾಜರಾಗಿ, ಉಪಕರಣಗಳನ್ನು ವಶಕ್ಕೆ ನೀಡಿದ್ದೇನೆ. ತನಿಖೆಯಿಂದಲೇ ಸತ್ಯ ಬಹಿರಂಗವಾಗಲಿದೆ ಎಂದು ಹೇಳಿದರು.
