ಕೊಣನೂರು: ಅಳಿಯನ ಕಿರುಕುಳದಿಂದ ಹಿಂಸೆ ಅನುಭವಿಸುತ್ತಿದ್ದ ಮಗಳನ್ನು ಕರೆದುಕೊಂಡು ಬಂದಿದ್ದಕ್ಕೆ ಆಕ್ರೋಶಗೊಂಡ ಅಳಿಯ ಮನೆಗೆ ಬಂದು ಅತ್ತೆಯನ್ನು ಚಾಕುವಿನಿಂದ ಇರಿದು ಕೊಲೆಗೈದಿರುವ ಘಟನೆ ರಾಮನಾಥಪುರದಲ್ಲಿ ಗುರುವಾರ ನಡೆದಿದೆ.
ರಾಮನಾಥಪುರದ ಫೈರೋಜ್ ಅಹಮದ (55) ಮೃತರು. ಬೆಟ್ಟದಪುರದ ರಸುಲ್ ಕೊಲೆ ಆರೋಪಿ. ಜಹೀರ್ ಅಹಮದ ಹಾಗು ಫೈರೋಜ್ ಅಹಮದ್ ಪುತ್ರಿ ಸಮೀರಾ ಅವರನ್ನು ಒಂಬತ್ತು ವರ್ಷಗಳ ಹಿಂದೆ ಬೆಟ್ಟದಪುರದ ರಸುಲ್‌ಗೆ ಕೊಟ್ಟು ಮದುವೆ ಮಾಡಲಾಗಿತ್ತು. ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ರಸುಲ್ ಆರಂಭದಲ್ಲಿ ಚೆನ್ನಾಗಿಯೇ ಇದ್ದ. ಕಳೆದ ಎರಡು ತಿಂಗಳಿಂದ ಮದ್ಯವ್ಯಸನಿಯಾಗಿ ಹೆಂಡತಿಗೆ ಚಿತ್ರಹಿಂಸೆ ನೀಡುತ್ತಿದ್ದ. ಮನೆಗೆ ದಿನಸಿ, ತರಕಾರಿ ತಂದುಕೊಡದೆ ಹಣವನ್ನೆಲ್ಲಾ ಕುಡಿತಕ್ಕೆ ಖರ್ಚು ಮಾಡುತ್ತಿದ್ದ. ಹೆಂಡತಿ ಜೊತೆಗೆ ಸುಖಾ ಸುಮನೆ ಜಗಳ ಮಾಡುತ್ತಿದ್ದ. ಅದರಿಂದ ಬೇಸತ್ತಿದ್ದ ಸಮೀರಾ ತಂದೆ-ತಾಯಿಗೆ ವಿಷಯ ತಿಳಿಸಿದ್ದರು.
ಗುರುವಾರ ಬೆಳಿಗ್ಗೆ ಸಂಬಂಧಿಕರೆಲ್ಲ ಬೆಟ್ಟದಪುರಕ್ಕೆ ತೆರಳಿ ಸಮೀರಾ ಅವರನ್ನು ರಾಮನಾಥಪುರದ ತವರು ಮನೆಗೆ ಕರೆತಂದಿದ್ದರು. ಅವರನ್ನೇ ಹಿಂಬಾಲಿಸಿಕೊಂಡು ಬಂದಿದ್ದ ರಸುಲ್ ಏಕಾಏಕಿ ಮನೆಯೊಳಗೆ ನುಗ್ಗಿದ್ದಾನೆ. ತನ್ನ ಜೊತೆಗೆ ಬರುವಂತೆ ಹೆಂಡತಿ ಜೊತೆಗೆ ಗಲಾಟೆ ಮಾಡುತ್ತಿದ್ದಾಗ ಜಗಳ ಬಿಡಿಸಲು ಬಂದ ಅತ್ತೆ ಫೈರೋಜ್ ಅವರ ಎದೆಗೆ ಚಾಕುವಿನಿಂದ ಇರಿದಿದ್ದಾನೆ. ನಂತರ ಹೆಂಡತಿ ಮೇಲೂ ಹಲ್ಲೆ ನಡೆಸಿದ್ದಾನೆ. ತೀವ್ರ ರಕ್ತಸ್ರಾವದಿಂದ ಫೈರೋಜ್ ಸ್ಥಳದಲ್ಲೇ ಮೃತಪಟ್ಟರೆ ಸಮೀರಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಪಿ ರಸುಲ್‌ನನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೊಣನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
