ಹಾಸನ: ರೋಟರಿ ಕ್ಲಬ್ ಆಫ್ ಸೆಂಟ್ರಲ್ ಹಾಸನ ವತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿತ್ ಭವನದಲ್ಲಿ ಶಿಕ್ಷಕರ ದಿನ ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕ್ಲಬ್ ಅಧ್ಯಕ್ಷ ರೊ. ಎಂ.ಡಿ. ನಾಗೇಶ್ ಮಾತನಾಡಿ, ಶಿಕ್ಷಕರು ಕೇವಲ ಪಾಠ ಹೇಳುವವರಲ್ಲ, ವಿದ್ಯಾರ್ಥಿಗಳ ಜೀವನ ರೂಪಿಸುವ ಶಿಲ್ಪಿಗಳು. ಸಮಾಜಕ್ಕೆ ನಿಷ್ಟಾವಂತ, ಜವಾಬ್ದಾರಿಯುತ ನಾಗರಿಕರನ್ನು ತಯಾರಿಸುವಲ್ಲಿ ಶಿಕ್ಷಕರ ಪಾತ್ರ ಅಪಾರವೆಂದು ತಿಳಿಸಿದರು.
ಉಪನ್ಯಾಸಕ ಪ್ರಕಾಶ್ ಮೇಗಲಕೇರಿ ಮಾತನಾಡಿ, ಡಾ. ಎಸ್. ರಾಧಾಕೃಷ್ಣನ್ ಅವರ ಜನ್ಮ ದಿನವನ್ನು ಶಿಕ್ಷಕರ ದಿನವಾಗಿ ಆಚರಿಸುವ ಪರಂಪರೆಯನ್ನು ಸ್ಮರಿಸಿದರು. ಪ್ರಗತಿಶೀಲ ಸಮಾಜಕ್ಕೆ ಶಿಕ್ಷಣ ಮುಖ್ಯವಾಗಿದ್ದು ಅದಕ್ಕೆ ಆಧಾರ ಶಿಕ್ಷಕರು. ಅವರ ಪರಿಶ್ರಮದಿಂದಲೇ ವಿದ್ಯಾರ್ಥಿಗಳು ಜ್ಞಾನಪೂರ್ಣ ಭವಿಷ್ಯವನ್ನು ಕಟ್ಟಿಕೊಳ್ಳುತ್ತಾರೆಂದರು.
ಉಪನ್ಯಾಸಕ ಹರೀಶ್ ಮಾತನಾಡಿ, ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಬಹುದೊಡ್ಡದು. ಶಿಕ್ಷಕರ ಪರಿಶ್ರಮವಿಲ್ಲದೆ ಮಹತ್ತರವಾದ ಸಾಧನೆ ಯಾರಿಂದಲೂ ಸಾಧ್ಯವಿಲ್ಲವೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು. ಗೌರವ ಸ್ವೀಕರಿಸಿದ ಶಿಕ್ಷಕರು ತಮ ಅನುಭವ ಹಂಚಿಕೊಂಡು, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಬದ್ಧತೆ ಪ್ರದರ್ಶಿಸಿದರು. ಕ್ಲಬ್ ಕಾರ್ಯದರ್ಶಿ ರೊ. ಅಶೋಕ್, ಖಜಾಂಚಿ ಯೋಗೇಶ್ ಗೌಡ, ಭಾರತಿ, ಅನುಪಮ ವೇದಿಕೆಯಲ್ಲಿದ್ದರು. ಪುಟಾಣಿ ಇಶಾನ್ ಶಿಕ್ಷಕರ ಕುರಿತು ಮಾಡಿದ ಭಾಷಣ ಗಮನ ಸೆಳೆಯಿತು. ರೋ. ಬಿ.ಆರ್. ಬೊಮೇಗೌಡ ಕಾರ್ಯಕ್ರಮ ನಿರೂಪಿಸಿದರು. ನಭಾ ನಾಗೇಶ್ ಪ್ರಾರ್ಥಿಸಿದರು. ರೋ. ಆರ್.ಕೆ. ದಯಾನಂದ್ ವಂದಿಸಿದರು.