ಹಾಸನ: ತಾಲ್ಲೂಕಿನ ಮೊಸಳೆಹೊಸಳ್ಳಿಯಲ್ಲಿ ಕಳೆದ ಶುಕ್ರವಾರ ನಡೆದ ಕ್ಯಾಂಟರ್ ಅವಘಡದಲ್ಲಿ ಹತ್ತು ಜನರು ದುರ್ಮರಣ ಹೊಂದಿದ ಘಟನೆ ಜಿಲ್ಲೆಯಾದ್ಯಂತ ಶೋಕ ಸನ್ನಿವೇಶ ಉಂಟುಮಾಡಿತ್ತು. ದುರಂತದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಅವರು ಸ್ಥಳೀಯರ ದುಃಖವನ್ನು ಆಲಿಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದ್ದರು.

ಅದೇ ಸಂದರ್ಭದಲ್ಲಿ ಗ್ರಾಮಸ್ಥರು, ಈ ರಸ್ತೆಯಲ್ಲಿ ವಾಹನಗಳು ಅತಿವೇಗದಲ್ಲಿ ಸಂಚರಿಸುತ್ತಿದ್ದು, ಇದರಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ತಕ್ಷಣವೇ ವೇಗ ನಿಯಂತ್ರಣಕ್ಕಾಗಿ ಹಂಪ್ಸ್ ನಿರ್ಮಾಣ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು.

ಸಚಿವರ ಸ್ಪಷ್ಟ ಸೂಚನೆಯಂತೆ ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಕ್ಷಣ ಕಾರ್ಯಪ್ರವೃತ್ತವಾಗಿದ್ದು, ರಸ್ತೆ ಅಪಘಾತ ತಡೆಗಟ್ಟುವ ಉದ್ದೇಶದಿಂದ ಮೊಸಳೆಹೊಸಳ್ಳಿಯ ಅಪಾಯಕಾರಿ ಭಾಗದಲ್ಲಿ ಹೊಸ ಹಂಪ್ಸ್‌ಗಳನ್ನು ನಿರ್ಮಿಸಿದೆ.

ಭಾನುವಾರ ಕಾಮಗಾರಿ ಸ್ಥಳಕ್ಕೆ ಸಂಸದ ಶ್ರೇಯಸ್ ಪಟೇಲ್ ಭೇಟಿ ನೀಡಿ ಪರಿಶೀಲಿಸಿದರು. ಹಂಪ್ಸ್ ನಿರ್ಮಾಣದಿಂದ ವಾಹನಗಳ ವೇಗ ನಿಯಂತ್ರಣವಾಗಲಿದ್ದು, ಇಂತಹ ದುರಂತಗಳು ಪುನರಾವರ್ತನೆಗೊಳ್ಳುವುದಿಲ್ಲ ಎಂಬ ಆಶಾಭಾವ ಮೂಡಿದೆ.

Leave a Reply

Your email address will not be published. Required fields are marked *