ಹಾಸನ: ಮೊಸಳೆಹೊಸಹಳ್ಳಿಯಲ್ಲಿ ನಡೆದ ದುರಂತದಲ್ಲಿ ಮೃತಪಟ್ಟವರಿಗೆ ಜೆಡಿಎಸ್ ಪಕ್ಷದಿಂದ ತಲಾ ಒಂದು ಲಕ್ಷ ರೂ. ಪರಿಹಾರ, ಗಂಭೀರ ಗಾಯಾಳುಗಳಿಗೆ 25 ಸಾವಿರ, ಮಧ್ಯಮ ಗಾಯಾಳುಗಳಿಗೆ 20 ಸಾವಿರ ಹಾಗೂ ಸಣ್ಣ ಪುಟ್ಟ ಗಾಯಾಳುಗಳಿಗೆ 15 ಸಾವಿರ ಪರಿಹಾರ ನೀಡಲಾಗುವುದು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಘೋಷಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊಸಳೆಹೊಸಳ್ಳಿ ಬಳಿ ನಡೆದ ದುರ್ಘಟನೆಯಲ್ಲಿ ಒಟ್ಟು ಹತ್ತು ಮಂದಿ ಸಾವನಪ್ಪಿದ್ದಾರೆ. 24 ಜನ ಗಾಯಗೊಂಡಿದ್ದಾರೆ. ಶನಿವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ಗಾಯಾಳುಗಳನ್ನು ಭೇಟಿ ಮಾಡಿ ಅವರ ಆರೋಗ್ಯ ವಿಚಾರಿಸಿದ್ದೇನೆ. ನಿಖಿಲ್ ಕುಮಾರಸ್ವಾಮಿ ಅವರು ಬಂದು ಪಕ್ಷದಿಂದ ಹಣ ಸಹಾಯ ಮಾಡುವುದಾಗಿ ಘೋಷಿಸಿದ್ದರು ಆದರೆ ಎಷ್ಟು ಹಣ ಎಂದು ಘೋಷಿಸಿರಲಿಲ್ಲ. ನಮ್ಮ ಪ್ರಾದೇಶಿಕ ಪಕ್ಷವಾಗಿದ್ದು ನಮ್ಮ ಪಕ್ಷದಲ್ಲಿ ಹಣ ಇರಲಿ ಅಥವಾ ಇಲ್ಲದೆ ಇರಲಿ ಪರಿಹಾರ ಕೊಡುವ ಹೊಣೆಯನ್ನು ನಾನು ಹೊತ್ತುಕೊಂಡಿದ್ದೇನೆ ಹಾಗಾಗಿ ಪರಿಹರವನ್ನು ಕಂಡಿತಾ ತಲುಪಿಸುತ್ತೇವೆ ಎಂದು ಭರವಸೆ ನಿಡಿದರು.
ಮೃತರ ಕುಟುಂಬದವರ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನಮಗೆ ನೀಡಿದರೆ ನಾವೇ ಮೃತರ ಕುಟುಂಬಸ್ಥರಿಗೆ ನೀಡುತ್ತೇವೆ ಅಥವಾ ಜಿಲ್ಲಾಡಳಿತವೇ ಮೃತರ ಕುಟುಂಬದವರಿಗೆ ತಲುಪಿಸುವುದಾದರು ಜಿಲ್ಲಾಡಳಿತಕ್ಕೆ ಹಣ ನೀಡಲು ನಾವು ಸಿದ್ದರಿದ್ದೇವೆ ಎಂದು ಹೇಳಿದರು.
ಸಿಎಂ ಈಗಾಗಲೇ ಐದು ಲಕ್ಷ ಪರಿಹಾರ ನೀಡಿದ್ದಾರೆ. ಇನ್ನೂ ಹೆಚ್ಚಿನ ಪರಿಹಾರ ನೀಡಬೇಕು ಎಂದು ಹಲವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ರಸ್ತೆಯ ಅಪಘಾತಗಳು ನಾನಾ ಕಾರಣದಿಂದ ಆಗುತ್ತವೆ. ನಾವು ಮುನ್ನೆಚ್ಚರಿಕೆ ವಹಿಸಿ ವಿದೇಶಗಳಲ್ಲಿ ಅಪಾಯವಾಗದ ರೀತಿ ರಸ್ತೆ ನಿರ್ಮಿಸಿದ್ದಾರೆ. ಅಂತಹ ಟೆಕ್ನಾಲಜಿ ನಮ್ಮಲ್ಲೂ ಬರಬೇಕು ಎಂದು ಹೇಳಿದರು.
93 ವರ್ಷ ಆಗಿದೆ. ಈ ವಯಸ್ಸಿನಲ್ಲೂ ರಾಜಕೀಯದಲ್ಲಿ ನಿವೃತ್ತಿಯಾಗಿಲ್ಲ. ಓಡಾಡುವುದಕ್ಕೆ ವೀಲ್ ಚೇರ್ ಬಳಸುತ್ತೇನೆ. ಪಾರ್ಲಿಮೆಂಟ್ ಗೂ ವೀಲ್‌ಚೇರ್ ನಲ್ಲೆ ಓಡಾಡುತ್ತೇನೆ.ಏಕೆಂದರೆ ನನಗೆ ಶಕ್ತಿ, ಅರ್ಹತೆ ಇದೆ. 65 ವರ್ಷದ ನನ್ನ ರಾಜಕೀಯ ಜೀವನದಲ್ಲಿ ನಾನು ಹಲವು ಹೋರಾಟ ಮಾಡಿಕೊಂಡು ಬಂದಿದ್ದೇನೆ. ರಾಜ್ಯದ ಅಭಿವೃದ್ಧಿಗೆ ನಾನು ಶಕ್ತಿಮೀರಿ ಪ್ರಯತ್ನಿಸುತ್ತಿದ್ದೇನೆ. 93 ವಯಸ್ಸಿನಲ್ಲಿ ಟೀಕೆ ಮಾಡುವುದರಿಂದ ಏನೂ ಉಪಯೋಗವಿಲ್ಲ ಎಂದರು