ಅರಕಲಗೂಡು: ತಾಲ್ಲೂಕಿನ ಸಂತೆ ಮರೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕಿ ಶಶಿಕಲಾ ಅವರು ಸ್ವಂತ ಹಣದಲ್ಲಿ ಶಾಲೆಗೆ ಬೋರ್‌ವೆಲ್‌ ಕೊರೆಯಿಸಿ ಸೇವಾ ಸಾರ್ಥಕತೆಯನ್ನು ಕಂಡು ಕೊಂಡಿದ್ದಾರೆ. ಇದು ಇತರೆ ಶಿಕ್ಷಕರಿಗೆ ಅಂತಃಕರಣ ಎಂದು ಭಾವಿಸಬೇಕಾ ಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಸೋಮವಾರ ಸಂತೆಮರೂರು ಶಾಲೆಗೆ ಭೇಟಿ ನೀಡಿ ಅತ್ಯುತ್ತಮ ಕೆಲಸ ನಿರ್ವಹಿಸಿರುವ ಮುಖ್ಯಶಿಕ್ಷಕಿ ಶಶಿಕಲಾ ಅವರನ್ನು ಇಲಾಖೆ ವತಿಯಿಂದ ಸತ್ಕರಿಸಿ ಮಾತನಾಡಿದ ಅವರು, ಈ ಶಾಲೆಗೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಕಂಡುಬರುತ್ತದೆ. ಇದನ್ನು ಅರಿತ ಶಿಕ್ಷಕಿ ಶಶಿಕಲಾ ಅವರು ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ ಒಬ್ಬರೇ ಜವಾಬ್ದಾರಿಯನ್ನು ತೆಗೆದುಕೊಂಡು ಸುಮಾರು 80 ಸಾವಿರ ರೂ.ಗಳನ್ನು ಭರಿಸಿ ಕೊಳವೆ ಬಾವಿಯನ್ನು ಕೊರೆಸಿದ್ದು ಉತ್ತಮವಾಗಿಯೂ ನೀರು ಬಂದಿದೆ. ಇದರಿಂದ ಮುಂದೆ ತಲೆ ದೋರಬಹುದಾಗಿದ್ದ ನೀರಿನ ಬವಣೆ ಯನ್ನು ನೀಗಿಸಿದ್ದಾರೆ ಎಂದರು.
ಶಾಲೆಗೆ ಅಗತ್ಯವಿರುವ ಇತರೆ ಸವಲತ್ತುಗಳನ್ನು ಶಶಿಕಲಾ ಅವರು ಕೋರಿಕೊಂಡಿದ್ದು, ಈಗಾಗಲೇ 2.5 ಲಕ್ಷ ರೂ.  ಶಾಲೆಗೆ ನಿಗದಿಯಾಗಿದೆ. ಇತರೆ ಅನುದಾನದಲ್ಲಿ ಆರ್ಥಿಕ ನೆರವು ಕಲ್ಪಿಸುವ ಭರವಸೆಯನ್ನು ಅವರು ನೀಡಿದರು.
ಶಾಲಾ ಮುಖ್ಯಶಿಕ್ಷಕಿ ಶಶಿಕಲಾ ಮಾತನಾಡಿ, ನಾನು ಇಲ್ಲಿಗೆ ಬಂದಾಗ ಕುಡಿಯುವ ನೀರು, ಶೌಚಕ್ಕೆ ನೀರಿನ ಸಮಸ್ಯೆಯನ್ನು ಗಮನಿಸಿದೆ. ನಿತ್ಯವೂ ಗ್ರಾಪಂನಿಂದ ನೀರು ಬರುತ್ತದೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿರುವ ಕಾರಣ ಅದು ಸಾಕಾಗುವುದಿಲ್ಲ. ಬೇರೆ ನೀರಿನ ಮೂಲಗಳು ಇರಲಿಲ್ಲ. ಈ ಸಲುವಾಗಿ ಕಿಂಚಿತ್ತು ಸೇವೆಯಿಂದ ಕೊಳವೆಬಾವಿ ಕೊರೆಯಿಸಿ ಮೋಟಾರ್‌ ಅಳವಡಿಸಿಕೊಂಡು ಅಗತ್ಯ ನೀರನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆ ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಯವರು ಜತೆಯಾಗಿ ನಿಂತು ಬೆಂಬಲಿ ಸಿದ್ದಾರೆ. ಶಾಲಾ ಕಿಟಿಕಿ, ಬಾಗಿಲು ದುರಸ್ತಿ ಕೆಲಸ ಕೂಡ ಆಗಬೇಕಿದೆ. ಇದನ್ನು ನನ್ನ ಮಗಳೊಂದಿಗೆ ಹೇಳಿ ಕೊಂಡಾಗ ಆಕೆ ವಿದೇಶದಲ್ಲಿದ್ದು, 20 ಸಾವಿರ ರೂ. ನೀಡಿದ್ದಾಳೆ, ಇದರೊಂದಿಗೆ ಮತ್ತಷ್ಟು ಹಣ ವ್ಯಯಿಸಿ ದುರಸ್ತಿ ಕೆಲಸ ಕೈಗೊಳ್ಳುವೆ ಎಂದು ಹೇಳಿದರು.
ಶಿಕ್ಷಣ ಸಂಯೋಜಕ ಯೋಗೇಶ್‌, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿ, ಶಿಕ್ಷಕರಾದ ಇಂದ್ರೇಗೌಡ, ಓದೇಶ್‌, ಪಾಂಡುರಾಜನ್‌, ಓಬಳೇಶ, ಮಹೇಶ್‌, ವಸಂತಕುಮಾರ್‌, ರೇಖಾ, ಶೈಲಾ ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *