ಹಾಸನ: ಅರಸೀಕೆರೆ ತಾಲ್ಲೂಕಿನ ಜಾವಗಲ್ ಹೋಬಳಿ ಬಂದೂರು ಗ್ರಾಮದಲ್ಲಿ ಮಹಿಳೆಯೊಬ್ಬರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಮೀನಾಕ್ಷಮ್ಮ (43) ಕೊಲೆಯಾದ ಮಹಿಳೆ.
ಮೃತರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತನೊಂದಿಗೆ ಮೀನಾಕ್ಷಮ್ಮನಿಗೆ ಇತ್ತೀಚೆಗೆ ಜಗಳ ಸಂಭವಿಸಿತ್ತು. ಸೆಪ್ಟೆಂಬರ್ 15ರಂದು ಮತ್ತೆ ಇಬ್ಬರ ನಡುವೆ ವಾಗ್ವಾದ ಉಂಟಾಗಿ, ಜಗಳ ವಿಕೋಪಕ್ಕೆ ತಿರುಗಿದೆ. ಈ ವೇಳೆ ಆರೋಪಿ ಅಪ್ರಾಪ್ತನು ಮೀನಾಕ್ಷಮ್ಮನ ತಲೆಗೆ ಕಲ್ಲಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಗ್ರಾಮದ ಪವನ್ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದೆ. ಸೆಪ್ಟೆಂಬರ್ 16ರಂದು ತಾಯಿಯ ಸಾವು ಅನುಮಾನಾಸ್ಪದ ಎಂದು ಮೀನಾಕ್ಷಮ್ಮನ ಪುತ್ರ ದಿನೇಶ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪ್ರಾಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ನಡೆದಿರುವುದು ಬಹಿರಂಗವಾಗಿದೆ.
ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
