ಹಾಸನ: ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವ ಹಾಸನ ರೆಡ್ ಕ್ರಾಸ್ ಸಂಸ್ಥೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಹೇಳಿದರು.
ನಗರದ ಸಾಲಗಾಮೆ ರಸ್ತೆಯಲ್ಲಿರುವ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿ, ಹಾಸನ ರೆಡ್ ಕ್ರಾಸ್ ಕಳೆದ ಏಪ್ರಿಲ್ ನಿಂದ ಏನೇನು ಕಾರ್ಯಕ್ರಮ ಮಾಡಿದ್ದಾರೆ ಎಂಬುದರ ಪಟ್ಟಿ ನೋಡಿದೆ. ಅದು ತುಂಬಾ ಹೆಮ್ಮೆಯ ವಿಷಯ. ಒಂದು ವರ್ಷದಲ್ಲಿ 60 ಕಾರ್ಯಕ್ರಮ ಆಯೋಜಿಸಿರುವುದು ಹೆಮ್ಮೆಯ ವಿಚಾರ. ನಾನು ಸಾಕಷ್ಟು ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದೇನೆ. ಆದರೆ ಇಷ್ಟು ಕ್ರಿಯಾಶೀಲ ಸಂಸ್ಥೆಯನ್ನು ನೋಡಿಲ್ಲ ಎಂದರು.
ಜಿಲ್ಲಾಡಳಿತದಿಂದ ಪ್ರತಿ ತಿಂಗಳು ಎರಡು ಬಾರಿ ರಸ್ತೆ ಸುರಕ್ಷತಾ ಕಾರ್ಯಕ್ರಮ ಮಾಡುತ್ತೇವೆ. ಶಾಲಾ ಕಾಲೇಜುಗಳಲ್ಲಿ ರಕ್ತದಾನದ ಅರಿವು ಮೂಡಿಸಬೇಕು. ಅಪಘಾತ ತಡೆಗಟ್ಟುವಿಕೆಯಲ್ಲಿ ಏನೇನು ಮಾಡಬೇಕು ಅಂತ ರೆಡ ಕ್ರಾಸ್ ನವರು ಆಕ್ಷನ್ ಪ್ಲಾನ್ ಮಾಡಿಟ್ಟುಕೊಂಡಿದ್ದಾರೆ. ಇದಕ್ಕೆ ಎಲ್ಲಾ ಸದಸ್ಯರ ಸಹಕಾರವೂ ಇದೆ. ಸಂಸ್ಥೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದರು.
ರೆಡ್ ಕ್ರಾಸ್ ನಿರ್ದೇಶಕರು ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನಿಸಲಾಯಿತು.
ಜಿಪಂ ಮುಖ್ಯಕಾರ್ಯನಿರ್ವಹಣಾಧಿಕಾರಿ ಬಿ.ಆರ್. ಪೂರ್ಣಿಮಾ, ರೆಡ್ ಕ್ರಾಸ್ ಸಭಾಪತಿ ಹೆಚ್.ಪಿ. ಮೋಹನ್, ನಿರ್ದೇಶಕರಾದ ಎಸ್.ಎಸ್. ಪಾಷಾ, ಅಮ್ಜದ್ ಖಾನ್, ಬಿ.ಆರ್. ಉದಯಕುಮಾರ್, ಕೆ.ಟಿ.ಜಯಶ್ರೀ, ಡಾ. ಸಾವಿತ್ರಿ, ಡಾ. ಭಾರತೀ ರಾಜಶೇಖರ್, ಡಾ. ರಂಗಲಕ್ಷ್ಮಿ, ಡಾ. ಅಬ್ದುಲ್ ಬಷೀರ್ ಇತರರಿದ್ದರು.
