ಹಾಸನ: ಆಧುನಿಕ ಜೀವನ ಶೈಲಿಯಿಂದ ಬರುವ ರೋಗಗಳ ಬಗ್ಗೆ ವಿಶೇಷ ಗಮನ ಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ (ಡಿಎಚ್‌ಒ) ಮತ್ತು ಹಿಮ್ಸ್ (HIMS) ನಿರ್ದೇಶಕರೊಂದಿಗೆ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ಪಡೆದು ಮಾತನಾಡಿ, ಹಿಂದಿನ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯಲ್ಲಿ ಮರಣ ಪ್ರಮಾಣ (mortality rate) ಕಡಿಮೆಯಾಗಿದೆ. ಕಳೆದ ವರ್ಷ ಒಟ್ಟು ದಾಖಲಾದ ರೋಗಿಗಳಲ್ಲಿ ಮರಣ ಪ್ರಮಾಣ 6.6% ಇದ್ದರೆ, ಈ ವರ್ಷ ಅದು 5.6% ಕ್ಕೆ ಇಳಿದಿದೆ. ವಿಶೇಷವಾಗಿ, ಹೃದಯಾಘಾತದಿಂದಾಗಿ ದಾಖಲಾದ 315 ಪ್ರಕರಣಗಳಲ್ಲಿ ಮರಣ ಪ್ರಮಾಣವು 6.03% ಇದೆ ಎಂದು ಸಚಿವರು ತಿಳಿದುಕೊಂಡರು.
ನಿಮ್ಮ ಗಮನವು ಕೇವಲ ಸಾಂಕ್ರಾಮಿಕ ರೋಗಗಳನ್ನು (communicable diseases) ತಡೆಗಟ್ಟುವ ಯೋಜನೆಗಳಿಗಷ್ಟೇ ಸೀಮಿತವಾಗಬಾರದು ಎಂದು ಡಿಎಚ್‌ಒ ಅವರಿಗೆ ಸ್ಪಷ್ಟವಾಗಿ ಹೇಳಿದರು.
ಇಂದು ಹೆಚ್ಚುತ್ತಿರುವ ಜೀವನಶೈಲಿ ಕಾಯಿಲೆಗಳಾದ ಕ್ಯಾನ್ಸರ್, ಯಕೃತ್ (liver) ಮತ್ತು ಹೃದ್ರೋಗಗಳ ಚಿಕಿತ್ಸೆಯ ಕಡೆಗೆ ಹೆಚ್ಚಿನ ಗಮನ ಹರಿಸುವಂತೆ ಸೂಚನೆ ನೀಡಿದರು.
ಇಲ್ಲಿಯವರೆಗೆ ಸಾಂಪ್ರದಾಯಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ ಮುಂತಾದವುಗಳ ನಿರ್ವಹಣೆಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು. ಆದರೆ, ಈಗಿನ ಆಧುನಿಕ ಸವಾಲುಗಳಿಗೆ ಹೊಂದಿಕೊಳ್ಳುವಂತೆ ಆರೋಗ್ಯ ವ್ಯವಸ್ಥೆಯನ್ನು ಸುಧಾರಿಸಬೇಕು ಎಂದು ಸಚಿವರು ತಿಳಿಸಿದರು. ತಮ್ಮ ನಿರ್ದೇಶನದಿಂದ ಆರೋಗ್ಯ ಇಲಾಖೆಯು ಹೊಸ ಚಿಂತನೆಯೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಅವರು ಆಶಿಸಿದರು.
