ಹಾಸನ: ಭಾರತದ ಖ್ಯಾತ ಕಾದಂಬರಿಕಾರ, ಚಿಂತಕ ಎಸ್.ಎಲ್. ಭೈರಪ್ಪ ಅವರ ಅಸ್ಥಿ ವಿಸರ್ಜನೆ ಇಂದು ಅವರ ಹುಟ್ಟೂರಾದ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೇಶಿವರದಲ್ಲಿ ನೆರವೇರಿತು. ಭೈರಪ್ಪ ಅವರ ಪುತ್ರರಾದ ರವಿಶಂಕರ್ ಹಾಗೂ ಉದಯ್‌ಶಂಕರ್ ವಿಧಿ ವಿಧಾನಗಳಂತೆ ಪೂಜೆ ಸಲ್ಲಿಸಿ, ನೀರು ತುಂಬಿಸಿರುವ ಸಂತೇಶಿವರ ಕೆರೆಯಲ್ಲಿ ಅಸ್ಥಿ ವಿಸರ್ಜನೆ ನೆರವೇರಿಸಿದರು. ಅಸ್ಥಿ ವಿಸರ್ಜನೆಗೂ ಮುನ್ನ ಮಂತ್ರೋಚ್ಚಾರಣೆ, ಘೋಷಗಳು ಮೊಳಗುತ್ತಿದ್ದಂತೆ ಗ್ರಾಮದಲ್ಲಿ ಅಸ್ಥಿ ಮೆರವಣಿಗೆ ನಡೆದಿದ್ದು, ನೂರಾರು ಮಂದಿ ಗ್ರಾಮಸ್ಥರು ಮತ್ತು ಅಭಿಮಾನಿಗಳು ಭಾವನಾತ್ಮಕವಾಗಿ ಸಾಕ್ಷಿಯಾದರು. ಭೈರಪ್ಪ ಅವರ ನೆನಪಿನೊಂದಿಗೆ ನಡೆದ ಈ ಅಂತಿಮ ಕ್ರಿಯೆಯಲ್ಲಿ ಸ್ಥಳೀಯರು, ಅಭಿಮಾನಿಗಳು ಹಾಗೂ ಸಾಹಿತ್ಯ ಪ್ರೇಮಿಗಳು ಹಾಜರಿದ್ದು, ದಿಗ್ಗಜ ಲೇಖಕರಿಗೆ ಕಣ್ಣೀರು ತುಂಬಿದ ಶ್ರದ್ದಾಂಜಲಿ ಸಲ್ಲಿಸಿದರು.