ಹಾಸನ: ಅರಸೀಕೆರೆ ತಾಲ್ಲೂಕಿನ ಜನತೆಗೆ ನೀಡಿರುವ ಭರವಸೆ ಈಡೇರುವ ತನಕ ರಾಜಕೀಯದಿಂದ ದೂರ ಸರಿಯುವುದಿಲ್ಲ.
ಎಲ್ಲಾ ಕೆರೆಗಳನ್ನು ತುಂಬಿಸಿ ಗಂಗಾ ಪೂಜೆ ಮಾಡಿಯೇ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿದರು.
ಅರಸೀಕೆರೆ ತಾಲ್ಲೂಕಿನ ಸಂಕೋಡನಹಳ್ಳಿ ಗ್ರಾಮದಲ್ಲಿ ಸೌರ ವಿದ್ಯುತ್ ಉತ್ಪಾದನಾ ಘಟಕಕ್ಕೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನನ್ನನ್ನು ರಾಜಕೀಯದಿಂದ ಹಿಮ್ಮೆಟ್ಟಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಆದರೆ ಅರಸೀಕೆರೆ ತಾಲ್ಲೂಕಿನ ಕೆರೆಗಳಿಗೆ ನೀರು ತುಂಬಿಸುವವರೆಗೂ ನಾನು ರಾಜಕೀಯ ಬಿಟ್ಟು ಹೋಗುವುದಿಲ್ಲ. ಕೆರೆಗಳಿಗೆ ನೀರು ತುಂಬಿಸಿ ಗಂಗೆ ಪೂಜೆ ಮಾಡಿ ಹೋದರೆ ಹೋಗುತ್ತೇನೆ. ಅದುವರೆಗೂ ಯಾರ ಕೈಯಲ್ಲೂ ನನ್ನನ್ನು ರಾಜಕೀಯದಿಂದ ದೂರ ಮಾಡುವ ಶಕ್ತಿ ಇಲ್ಲ ಎಂದು ಶಪಥ ಮಾಡಿದರು.
ಜನತೆಗೆ ನೀಡಿದ ಆಶ್ವಾಸನೆಗಳನ್ನು ಪೂರೈಸಿದ ನಂತರ ಮಾತ್ರ ರಾಜಕೀಯದಿಂದ ದೂರ ಸರಿಯುತ್ತೇನೆ. ಹೆದರೋ ಪ್ರಶ್ನೆಯೇ ಇಲ್ಲ. ವ್ಯಾಟ್ಸಪ್‌ಗಳಲ್ಲಿ ಏನೇನು ಹಾಕಿದರೂ ನನಗೆ ಅಷ್ಟೊಂದು ವ್ಯತ್ಯಾಸವಿಲ್ಲಎಂದು ಸ್ಪಷ್ಟಪಡಿಸಿದರು.
ಇಲ್ಲಿನ ರಸ್ತೆಗಳು ಗುಂಡಿ ಬೀಳದಂತೆ ನೋಡಿಕೊಂಡಿದ್ದೇನೆ. ಆದರೆ ಬೆಂಗಳೂರಿನ ರಸ್ತೆಯಲ್ಲಿ ಗುಂಡಿಗಳು ಬಿದ್ದಿವೆ ಎಂಬುದನ್ನು ಸ್ವತಃ ನಾನು ಒಪ್ಪಿಕೊಳ್ಳುತ್ತೇನೆ. ತಿಪಟೂರು ಹಾಗೂ ಹಾಸನದಲ್ಲಿಯೂ ರಸ್ತೆಗಳ ಸ್ಥಿತಿ ಹದಗೆಟ್ಟಿದೆ. ಆದರೆ ಅರಸೀಕೆರೆಯಲ್ಲಿ ಮಾತ್ರ ರಸ್ತೆ ಗುಣಮಟ್ಟ ಕಾಪಾಡಲಾಗಿದೆ ಎಂದು ಅಭಿಪ್ರಾಯಪಟ್ಟರು.
ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಹಾಗೂ ಜೆಡಿಎಸ್ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ಅರಸೀಕೆರೆ ರಾಜಕೀಯ 90 ವರ್ಷಗಳಿಂದ ನಲುಗಿ ಹೋಗಿದೆ. ಅದನ್ನು ಬದಲಿಸಲು ನಾನು ಬದ್ಧನಾಗಿದ್ದೇನೆ. ಯಾರೇ ಆರೋಪ ಮಾಡಿದರೂ ಜನ ನನ್ನ ಕೈ ಬಿಡುವುದಿಲ್ಲ ಎಂದು ಸ್ಪಷ್ಟ ಸಂದೇಶ ನೀಡಿದರು.

Leave a Reply

Your email address will not be published. Required fields are marked *