ಸಕಲೇಶಪುರ: ಅಳಿವಿನಿಂಚನಲ್ಲಿರುವ, ಪಶ್ಚಿಮ ಘಟದಲ್ಲಿ ಅಪರೂಪವಾಗಿರುವ ಮರುಭೂಮಿ ಬೆಕ್ಕನ್ನು (ಪುನುಗು ಜಾತಿಗೆ ಸೇರಿದ) ಬೀದಿ ನಾಯಿಗಳ ಹಾವಳಿಯಿಂದ ಸ್ಥಳೀಯರು ರಕ್ಷಿಸಿದ್ದಾರೆ.
ಪಟ್ಟಣದ ಸಲೀಂ ಹಾಗೂ ವೆಂಕಟೇಶ್ ಅವರು ಮರುಭೂಮಿ ಬೆಕ್ಕನ್ನು ರಕ್ಷಿಸಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. 50 ಕ್ಕೂ ಹೆಚ್ಚು ಬೀದಿ ನಾಯಿಗಳು ಮರುಭೂಮಿ ಬೆಕ್ಕಿನ ಮೇಲೆ ದಾಳಿ ನಡೆಸುತ್ತಿದ್ದವು. ಅವುಗಳಿಗೆ ಪ್ರತಿರೋಧ ತೋರುತ್ತಲೇ ಕೊನೆಗೆ ನಿತ್ರಾಣಗೊಂಡಿದ್ದ ಬೆಕ್ಕು ಒಂದು ಕಡೆ ನಿಂತಿದ್ದನ್ನು ನೋಡಿದ ಸಲೀಂ ಹಾಗೂ ವೆಂಕಟೇಶ್ ಹತ್ತಿರ ತೆರಳಿದಾಗ ಎಂದೂ ಕಂಡಿರದ ಬೆಕ್ಕು ಎಂದು ಗುರುತಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಅದನ್ನು ವಶಕ್ಕೆ ಪಡೆದರು.
ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು ಸಾರ್ವಜನಿಕರು ಹೈರಾಣಾಗಿದ್ದಾರೆ.
